ಬೆಂಗಳೂರು: ಅಮೆರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖರಾಗಿರುವ ನಟ ಶಿವರಾಜ್ ಕುಮಾರ್, ಇಂದು ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಶಿವಣ್ಣನ ಅಭಿಮಾನಿಗಳ ಸಂತಸ-ಸಂಭ್ರಮ ಮುಗಿಲುಮುಟ್ಟಿದೆ.
ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೂ ಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಅಭಿಮಾನಿಗಳು ಬೃಹತ್ ಹೂವಿನ ಹಾರ ಹಾಕಿ ಶಿವಣ್ಣನಿಗೆ ಸ್ವಾಗತ ಕೋರಿದರು.
ಈ ವೇಳೆ ಮಾತನಾಡಿದ ಅರ್ಜುನ್ ಜನ್ಯ, ನಮ್ಮೆಲ್ಲರ ನೆಚ್ಚಿನ ಶಿವರಾಜ್ ಕುಮಾರ್ ನಮಗೆ ದೇವರಿದ್ದಂತೆ. ಅವರು ಸಂಪೂರ್ಣವಾಗಿ ಗುಣಮುಖರಾಗಿ ಬೆಂಗಳೂರಿಗೆ ಮರಳಿ ಬಂದಿದ್ದಾರೆ. ಅದೆ ನಮ್ಮೆಲ್ಲರಿಗೂ ಖುಷಿಯ ವಿಚಾರ. ನಮಗೆಲ್ಲ ಇಂದು ಒಂದು ರೀತಿಯ ಹಬ್ಬ. ಚಿತ್ರರಂಗಕ್ಕೂ ಹಬ್ಬದ ವಾತಾವರಣ ಎಂದು ಸಂತಸ ಹಂಚಿಕೊಂಡರು.
ಇದೇ ವೇಳೆ ಏರ್ ಪೋರ್ಟ್ ಬಳಿಯ ಸಾದಹಳ್ಳಿ ಗೇಟ್ ಬಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಶಿವಣ್ಣನ ಅಭಿಮಾನಿಗಳು ಬೃಹತ್ ಸೇಬು ಹಾರ ಹಾಕಿ, ಶಿವಣ್ಣನ ಪರ ಘೋಷಣೆ ಕೂಗಿ ಸಂಭ್ರಮಿಸಿದರು.