ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಗುಡ್ಡದಲ್ಲಿ ಇಂದು ಕೂಡ ನಿಷೇಧಾಜ್ಞೆ ಮುಂದುವರೆದಿದೆ.
ರಾಗಿಗುಡ್ಡದಲ್ಲಿ ಸತತ 6ನೇ ದಿನವೂ ಕೂಡ ನಿಷೇಧಾಜ್ಞೆ ಮುಂದುವರೆಸಲಾಗಿದ್ದು, ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು, ಶಾಲಾ, ಕಾಲೇಜು, ಉದ್ಯೋಗಕ್ಕೆ ಹೋಗಲು ಮಾತ್ರ ಅವಕಾಶ ನೀಡಲಾಗಿದೆ.ರಾಗಿಗುಡ್ಡದಲ್ಲಿ ಎಲ್ಲೆಲ್ಲೂ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
6 ದಿನಗಳ ಹಿಂದೆ ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ಗಲಾಟೆ ನಡೆದು, ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿತ್ತು. ಘಟನೆಯಲ್ಲಿ ಪೊಲೀಸರು ಸೇರಿ 7 ಜನರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಗಿಗುಡ್ಡದಲ್ಲಿ ಇಂದಿಗೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಮುಂದುವರೆಸಲಾಗಿದೆ.