
ಶಿವಮೊಗ್ಗ: ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದ ದಂಪತಿಯನ್ನು ಲೋಕ್ ಅದಾಲತ್ ನಲ್ಲಿ ಮತ್ತೆ ಒಂದಾಗುವಂತೆ ರಾಜಿ ಸಂಧಾನ ಮಾಡಲಾಗಿದೆ.
ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ಮೂಲಕ ಸಂಬಂಧ ಮತ್ತು ಸಮಯವನ್ನು ಉಳಿಸಿಕೊಳ್ಳಬಹುದು ಎಂದು ಹೈಕೋರ್ಟ್ ನ್ಯಾಯಾಧೀಶ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಆರ್.ದೇವದಾಸ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘದ ಸಹಯೋಗದೊಂದಿಗೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಲೋಕ್ ಅದಾಲಯ್ ಉದ್ಘಾಟಿಸಿ ಮಾತನಾಡಿದ ಆರ್.ದೇವದಾಸ್, ಕಕ್ಷಿದಾರರು ಕೋರ್ಟ್ ಗೆ ಬರುವುದನ್ನು ಆದಷ್ಟು ಕಡಿಮೆ ಮಾಡಬೇಕು. ವ್ಯಾಜ್ಯಗಳನ್ನು ನಮ್ಮಲ್ಲಿಯೇ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ರಾಜಿ, ಮಧ್ಯಸ್ಥಿಕೆ ಮೂಲಕ ಅನೇಕ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಹೇಳಿದರು.
ಇದೇ ಉದ್ದೇಶಕ್ಕೆ ಲೋಕ ಅದಾಲತ್ ನಡೆಸಲಾಗುತ್ತಿದೆ. ಕಕ್ಷಿದಾರರಿಗೆ ಶೀಘ್ರ ನ್ಯಾಯ ಮತ್ತು ಅವರ ಸಮಯ, ಸಂಬಂಧ, ಹಣ ಉಳಿಸಲು ಲೋಕ ಅದಾಲತ್ ನಲ್ಲಿ ರಾಜಿ ಸೂತ್ರದ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಗುತ್ತದೆ ಎಂದರು.
ಇಂದಿನ ಲೋಕ ಅದಾಲತ್ ನಲ್ಲಿ 12 ಸಾವಿರ ನ್ಯಾಯಾಲಯ ಪ್ರಕರಣಗಳು, 85 ಸಾವಿರ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶ ಹೊಂದಲಾಗಿದೆ. ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಯನ್ನು ರಾಜಿ ಮೂಲಕ ಮತ್ತೆ ಒಂದು ಮಾಡಲಾಗಿದ್ದು, ದಂಪತಿಗಳು ಪರಸ್ಪರ ಹಾರ ಬದಲಾಯಿಸಿ, ಸಿಹಿ ನೀಡಿದರು. ನ್ಯಾಯಾಧೀಶರು ರಾಜೀಪತ್ರ ವಿತರಣೆ ಮಾಡಿದರು. ಇದೇ ವೇಳೆ ಅಪಘಾತ ಪ್ರಕರಣದಲ್ಲಿ ಪರಿಹಾರ ಕೋರಿದ್ದ ಕಕ್ಷಿದಾರರಿಗೆ, ವ್ಯಾಜ್ಯ ಪ್ರಕರಣದಲ್ಲಿ ರಾಜಿ ಆದ ಕುಟುಂಬಗಳಿಗೆ ರಾಜಿ ಪತ್ರ ವಿತರಿಸಲಾಯಿತು.