alex Certify ಕೆರೆ ಮಣ್ಣು ತೆಗೆದ ಪ್ರಕರಣ: ಶಿವಮೊಗ್ಗ ಜಿಪಂ ಸಿಇಒ ಬಂಧನಕ್ಕೆ ವಾರೆಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆರೆ ಮಣ್ಣು ತೆಗೆದ ಪ್ರಕರಣ: ಶಿವಮೊಗ್ಗ ಜಿಪಂ ಸಿಇಒ ಬಂಧನಕ್ಕೆ ವಾರೆಂಟ್

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಕೆರೆಯಲ್ಲಿ ಮಣ್ಣು ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ನಂತರವೂ ವರದಿ ಸಲ್ಲಿಸದ ಶಿವಮೊಗ್ಗ ಜಿಲ್ಲಾ ಪಂಚಾಯತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಬಂಧನಕ್ಕೆ ಕರ್ನಾಟಕ ಭೂಕಬಳಿಕೆ ವಿಷಯದ ವಿಶೇಷ ನ್ಯಾಯಾಲಯ ವಾರೆಂಟ್ ಹೊರಡಿಸಿದೆ.

ಡಿಸೆಂಬರ್ 21ರಂದು ಅರೆಸ್ಟ್ ವಾರೆಂಟ್ ಹೊರಡಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿಇಒ ಅವರನ್ನು ದಸ್ತಗಿರಿ ಮಾಡಲು ಶಿವಮೊಗ್ಗ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ.

ಫೆಬ್ರವರಿ 16ರಂದು ಬೆಳಗ್ಗೆ 11 ಗಂಟೆಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಹಾಜರಾಗಲು ಬಿಡುಗಡೆಗಾಗಿ ಅವರಿಂದ 25,000 ರೂ ಮುಚ್ಚಳಿಕೆ ಬಳಸಿಕೊಳ್ಳುವಂತೆ ವಾರೆಂಟ್ ನಲ್ಲಿ ಸೂಚನೆ ನೀಡಲಾಗಿದೆ.

ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಖಾಸಗಿ ಬಡಾವಣೆ ನಿರ್ಮಾಣಕ್ಕಾಗಿ ನೆಲ ಸಮತಟ್ಟು ಮಾಡಲು ಅಬ್ಬಲಗೆರೆ ಕೆರೆಯಲ್ಲಿ ನಿಯಮಬಾಹಿರವಾಗಿ ಮಣ್ಣು ತೆಗೆದು ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಜಗದೀಶ್ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ತನಿಖೆಗೆ ಆದೇಶ ನೀಡಿದ್ದು, ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಇಂಜಿನಿಯರ್ ತನಿಖೆ ನಡೆಸಿ 500 ಲೋಡ್ ಮಣ್ಣು ತೆಗೆಯಲು 56 ಸಾವಿರ ಮಾತ್ರ ಪಾವತಿಸಲಾಗಿದ್ದು, ಕೆರೆಯಲ್ಲಿ 15 ಸಾವಿರಕ್ಕೂ ಅಧಿಕ ಲೋಡ್ ಫಲವತ್ತಾದ ಮಣ್ಣನ್ನು ತೆಗೆದು ಸಾಗಿಸಲಾಗಿದೆ. 72 ಲಕ್ಷಕ್ಕೂ ಅಧಿಕ ರಾಜಧನ ಪಾವತಿಸಿಲ್ಲ ಎಂದು ವರದಿ ನೀಡಿದ್ದರು. ಮಾಧ್ಯಮಗಳಲ್ಲಿ ಬಂದ ವರದಿ ಗಮನಿಸಿದ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯ ಪಾಟೀಲ ನಾಗನಗೌಡ ಅವರು ಸ್ವಪ್ರೇರಣೆಯಿಂದ ಪ್ರಕರಣ ಕೈಗೆತ್ತಿಕೊಳ್ಳಲಾಗಿದೆ ಎಂದು ಕೋರ್ಟ್ ಗೆ ಟಿಪ್ಪಣಿ ಸಲ್ಲಿಸಿದ್ದರು. ನ್ಯಾಯಾಲಯ ಅಕ್ಟೋಬರ್ 20ರಂದು ಆದೇಶ ನೀಡಿ, ನವೆಂಬರ್ 24ರಂದು ವರದಿ ಸಲ್ಲಿಸಲು ಜಿಪಂ ಸಿಇಒಗೆ ಸೂಚಿಸಿತ್ತು. ಆದರೆ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...