ಶಿವಮೊಗ್ಗದಲ್ಲಿ ಪೌರಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಪೌರಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಇಂದು ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ಪೌರ ಕಾರ್ಮಿಕರ ಆರೋಗ್ಯ ವಿಚಾರಿಸಿದ್ದಾರೆ.
ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ತುಂಗಾನಗರ ಠಾಣೆ ಪೊಲೀಸರ ವಿರುದ್ಧ ಕಿಡಿಕಾರಿದ ಅವರು, ಪೊಲೀಸರ ಕೆಲಸ ಸರಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸಂಜೆ ವೇಳೆಗೆ ಎಲ್ಲಾ ಆರೋಪಿಗಳನ್ನು ಬಂಧಿಸಬೇಕೆಂದು ಸೂಚನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಪೌರಕಾರ್ಮಿಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದರೂ ಅವರ ಮೇಲೆ ಕೆಲವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಜೆಪಿ ನಗರದಲ್ಲಿ ಕಸ ಸಂಗ್ರಹಿಸಲು ಹೋಗಿದ್ದ ಪೌರಕಾರ್ಮಿಕರ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದೇನೆ. ಹಲ್ಲೆಗೊಳಗಾದ ಕಾರ್ಮಿಕರೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.
ಪೊಲೀಸ್ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಇದುವರೆಗೂ ಕ್ರಮಕೈಗೊಳ್ಳದೆ ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ. ಶಿವಮೊಗ್ಗದಲ್ಲಿ ಏನೇನು ನಡೆಯುತ್ತಿದೆ ಎಂದು ಗೊತ್ತಿದೆ. ಪೊಲೀಸ್ ಇಲಾಖೆ ಅಲರ್ಟ್ ಆಗಬೇಕಿದೆ. ಬಗ್ಗೆ ಜಿಲ್ಲೆಯಲ್ಲಿ ಗೂಂಡಾಗಳಿಗೆ, ಗಲಾಟೆ ಮಾಡುವವರಿಗೆ ಯಾವುದೇ ಭಯವಿಲ್ಲದಂತಾಗಿದೆ. ಇಂತಹ ವಾತಾವರಣ ಸರಿ ಮಾಡುವ ದಿಕ್ಕಿನಲ್ಲಿ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.