ಶಿವಮೊಗ್ಗ: ಜಿಪಿಎಸ್, ಪ್ಯಾನಿಕ್ ಬಟನ್, ರೆಟ್ರೋ ರಿಫ್ಲೆಕ್ಟಿವ್ ಟೇಪ್ ಕಡ್ಡಾಯ ಅಳವಡಿಕೆಗೆ ವಾಹನ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳದಿದ್ದರೆ ಆರ್ ಟಿಒ ನಲ್ಲಿ ವಾಹನಗಳ ಪರವಾನಗಿ ನವೀಕರಣ ಮಾಡುತ್ತಿಲ್ಲ. ಇದರಿಂದ ವಾಹನ ಮಾಲೀಕರು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಸರ್ಕಾರ ಜಿಪಿಎಸ್, ಪ್ಯಾನಿಕ್ ಬಟನ್ ಅಳವಡಿಸಿಕೊಳ್ಳದಿದ್ದರೂ ವಾಹನಗಳ ಪರವಾನಗಿ ನವೀಕರಣಕ್ಕೆ ಅವಕಾಶ ನೀಡಬೇಕು ಹಾಗೂ ನಿಗದಿತ ಏಜೆನ್ಸಿ ಬಳಿಯೇ ರೆಟ್ರೋ ರಿಫ್ಲೆಕ್ಟಿವ್ ಟೇಪ್ ಹಾಕಿಸಿಕೊಳ್ಳಬೇಕು ಎಂಬ ನಿಯಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ವಾಹನ ಮಾಲೀಕರು ಶಿವಮೊಗ್ಗ ಆರ್ ಟಿ ಒ ಜಂಟಿ ಆಯುಕ್ತ ಭೀಮನಗೌಡ ಅವರಿಗೆ ಮನವಿ ಸಲ್ಲಿಸಿದರು.
ಅವರು ಹೇಳಿದ ಕಡೆಯಲ್ಲಿಯೇ ಹೋಗಿ ಜಿಪಿಎಸ್ ಅಳವಡಿಸಿಕೊಳ್ಳಬೇಕು. ನಿಗದಿ ಪಡಿಸದ ಸ್ಥಳದಲ್ಲೇ ರೆಟ್ರೋ ರಿಫ್ಲೆಕ್ಟಿವ್ ಟೇಪ್ ಅಳವಡಿಸಬೇಕು ಎಂಬ ನಿಯಮ ಸರಿಯಿಲ್ಲ. ಒಂದು ಕಾರಿಗೆ ರೆಟ್ರೋ ರಿಫ್ಲೆಕ್ಟಿವ್ ಅಳವಡಿಕೆಗೆ 2 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಏಜೆನ್ಸಿಯವರು 6 ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಜಿಪಿಎಸ್ ಅಳವಡಿಕೆಗೆ 16 ಸಾವಿರ ಕೇಳುತ್ತಿದ್ದಾರೆ. ಬೇರೆ ಕಡೆ ಕೇವಲ 4 ಸಾವಿರದಲ್ಲಿ ಆಗುತ್ತದೆ. ಹಾಗಾಗಿ ಏಜೆನ್ಸಿ ಬಿಟ್ಟು ಬೇರೆಡೆ ಹಾಕಿಸಿಕೊಳ್ಳಲು ಅವಕಾಶ ಕೊಡಬೇಕು ಎಂದು ವಾಹನ ಮಾಲೀಕರು ಒತ್ತಾಯಿಸಿದ್ದಾರೆ.