ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕರಾವಳಿ, ಪಶ್ಚಿಮ ಘಟ್ಟ ಪ್ರದೇಶ, ಮಲೆನಾಡು, ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜುಲೈ 9 ರವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಯ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಹಲವೆಡೆ ಶಾಲೆಗಳಿಗೆ ರಜೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಆದೇಶದಂತೆ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಈ 3 ತಾಲ್ಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜುಲೈ 6 ರ ಬುಧವಾರ ರಜೆ ಘೋಷಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ 5 ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಲ್ಕು ದಿನ ರಜೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಎನ್.ಆರ್. ಪುರ, ಕೊಪ್ಪ ತಾಲೂಕಿನ ಶಾಲೆಗಳಿಗೆ ಡಿಸಿ ರಮೇಶ್ ರಜೆ ಘೋಷಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಅಂಬಳೆ ಹೋಬಳಿಯಲ್ಲಿ ರಜೆ ಇರುವುದಿಲ್ಲ ಇವೆರಡು ಹೋಬಳಿ ಹೊರತುಪಡಿಸಿ ಚಿಕ್ಕಮಗಳೂರು ತಾಲೂಕಿನ ಉಳಿದೆಡೆ ರಜೆ ಇರಲಿದೆ. ಜುಲೈ 9ರವರೆಗೆ ರಜೆ ನೀಡಲಾಗಿದೆ ಎನ್ನಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಶಾಲೆ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ್ ಆದೇಶ ಹೊರಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ.