ಶಿವಮೊಗ್ಗ: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಪಿ.ಎಸ್. ರುದ್ರೇಶ್ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ನಗರದ ನಿವಾಸದಲ್ಲಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ಚಾಲುಕ್ಯ ನಗರದಲ್ಲಿ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಮನೆ, ಗೋಪಾಲಗೌಡ ಬಡಾವಣೆಯಲ್ಲಿ 80 ಲಕ್ಷ ರೂಪಾಯಿ ಮೌಲ್ಯದ ಮನೆಯನ್ನು ರುದ್ರೇಶ್ ಹೊಂದಿದ್ದಾರೆ.
ಅಲ್ಲದೆ ಅವರು ಎರಡು ಜೆಸಿಬಿ, ಲಕ್ಷಾಂತರ ರೂಪಾಯಿ ಮೌಲ್ಯದ ಎಲ್ಐಸಿ ಬಾಂಡ್ ಗಳನ್ನು ಹೊಂದಿದ್ದಾರೆ. ಬ್ಯಾಂಕ್ ನಲ್ಲಿ 20 ಲಕ್ಷ ರೂಪಾಯಿ ಠೇವಣಿ ಇಡಲಾಗಿದೆ. ಇನ್ನು ರುದ್ರೇಶ್ ಅವರ ಮನೆಯಲ್ಲಿ 7 ಕೆಜಿ ಚಿನ್ನದ ಬಿಸ್ಕೆಟ್, ಡೈಮಂಡ್ ಹಾರ, 1.5 ಕೆಜಿ ಚಿನ್ನಾಭರಣ, 3 ಕೆಜಿ ಬೆಳ್ಳಿ ಹಾಗೂ 15 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.
20 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, ಎರಡು ದ್ವಿಚಕ್ರ ವಾಹನಗಳು, 8 ಎಕರೆ ಕೃಷಿ ಜಮೀನು 4 ನಿವೇಶನ ಪತ್ತೆಯಾಗಿವೆ. ನಾಳೆ ಬೆಳಗ್ಗೆ ಒಂದು ಲಾಕರ್ ಓಪನ್ ಮಾಡಬೇಕಿರುವ ಹಿನ್ನಲೆಯಲ್ಲಿ ರುದ್ರೇಶ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಎಸಿಬಿ ಎಸ್.ಪಿ. ಜಯಪ್ರಕಾಶ್ ನೇತೃತ್ವದ ಅಧಿಕಾರಿಗಳ ತಂಡ ಅವರನ್ನು ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ.