alex Certify ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮೂವರ ಸಾವು: ಜಾನುವಾರು, ಬೆಳೆ ಸೇರಿ ಅಪಾರ ಹಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮೂವರ ಸಾವು: ಜಾನುವಾರು, ಬೆಳೆ ಸೇರಿ ಅಪಾರ ಹಾನಿ

ಶಿವಮೊಗ್ಗ: ಜಿಲ್ಲೆಯಲ್ಲಿ ಜುಲೈ 21 ರವರೆಗೆ ಸರಾಸರಿ 529.0 ಮಿ.ಮೀ ವಾಡಿಕೆ ಮಳೆಗೆ 831.00 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.57 ರಷ್ಟು ಹೆಚ್ಚು ಮಳೆ ವರದಿಯಾಗಿದೆ.

ಜುಲೈ ಮಾಹೆಯಲ್ಲಿ ಭಾರೀ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಪರಿಹಾರ ಕ್ರಮಗಳು ಪ್ರಗತಿಯಲ್ಲಿವೆ.

ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಹೊಸನಗರ ತಾಲ್ಲೂಕಿನ ಬೈಸೆ ಗ್ರಾಮದ ಶಶಿಕಲಾ, ತೀರ್ಥಹಳ್ಳಿ ತಾಲ್ಲೂಕಿನ ಬಿದರಗೋಡು ಗ್ರಾಮದ ನಾಗೇಂದ್ರ ಹಾಗೂ ಶಿಕಾರಿಪುರ ತಾಲ್ಲೂಕಿನ ಅಮಟೇಕೊಪ್ಪ ಗ್ರಾಮದ ನಾಗರಾಜ ಮರಣ ಹೊಂದಿರುತ್ತಾರೆ. ಶಶಿಕಲಾ ಮತ್ತು ನಾಗೇಂದ್ರ ಕುಟುಂಬದವರಿಗೆ ಎಸ್‍ಡಿಆರ್‍ಎಫ್ ಮತ್ತು ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿರುತ್ತದೆ. ನಾಗರಾಜ ಅವರ ಕುಟುಂಬಕ್ಕೆ ವರದಿ ಬಂದ ನಂತರ ಪರಿಹಾರ ವಿತರಣೆ ಮಾಡಲಾಗುವುದು.

ಜಿಲ್ಲೆಯಲ್ಲಿ ಜುಲೈ 19 ರವರೆಗೆ ಒಟ್ಟು 6 ಜಾನುವಾರು ಮೃತಪಟ್ಟಿದ್ದು, ಪರಿಹಾರಕ್ಕೆ ಕ್ರಮ ವಹಿಸಲಾಗುತ್ತಿದೆ. ಅತಿ ಹೆಚ್ಚು ಮಳೆಯಿಂದ ಜೂನ್‍ವರೆಗೆ ಸುಮಾರು 7 ಮನೆ ಪೂರ್ಣ ಹಾನಿಗೊಳಪಟ್ಟಿದ್ದು, ಅದರಲ್ಲಿ 4 ಮನೆಗಳಿಗೆ ತಲಾ 1.20 ಲಕ್ಷ ರೂ. ನೀಡಲಾಗಿದೆ. 130 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಪರಿಹಾರ ನೀಡಲು ಕ್ರಮ ವಹಿಸಲಾಗಿದೆ.

ಜಿಲ್ಲೆಯಲ್ಲಿ ಸುಮಾರು 74916 ಹೆ. ಭತ್ತದ ಪ್ರದೇಶದಲ್ಲಿ 9508 ಹೆ. ಬಿತ್ತನೆಯಾಗಿದೆ. ಬಿತ್ತನೆಯಾದ ಪ್ರದೇಶದಲ್ಲಿ ಸಾಗರ ತಾಲ್ಲೂಕಿನ ತಾಳಗುಪ್ಪ 500 ಹೆ, ಕಸಬಾ 20 ಹೆ, ಆನಂದಪುರ 10 ಹೆ, ಸೊರಬ ತಾಲ್ಲೂಕಿನ ಅಬಸೇ, ಕಡಸೂರು ಗ್ರಾಮಗಳು ಸೇರಿ ಒಟ್ಟು 610 ಹೆ.ಪ್ರದೇಶ ಜಲಾವೃತಗೊಂಡಿರುತ್ತದೆ. ಜಂಟಿ ಸಮೀಕ್ಷೆ ನಂತರ ಹಾನಿ ಪ್ರಮಾಣವನ್ನು ಅಂದಾಜಿಸಲಾಗುವುದು. ಮತ್ತು 47000 ಹೆಕ್ಟೇರ್ ಪ್ರದೇಶದಲ್ಲಿ 43345 ಹೆ.ಬಿತ್ತನೆಯಾಗಿದ್ದು ಈವರೆಗೆ ಯಾವುದೇ ಹಾನಿಯಾಗಿರುವುದಿಲ್ಲ.

ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ 767 ವಿದ್ಯುತ್ ಕಂಬಗಳು ಹಾನಿಯಾಗಿದೆ ಹಾಗೂ 16 ಟ್ರಾನ್ಸ್‍ಫಾರ್ಮರ್ ಗಳು ಹಾನಿಯಾಗಿಯಾಗಿರುತ್ತವೆ.

ಪ್ರವಾಹದಿಂದ 24.92 ಕಿ.ಮೀ ರಾಜ್ಯ ಹೆದ್ದಾರಿ, 42.13 ಕಿ.ಮೀ ಜಿಲ್ಲೆಯ ಮುಖ್ಯ ರಸ್ತೆ, 421.00 ಕಿ.ಮೀ ಗ್ರಾಮೀಣ ರಸ್ತೆ ಹಾನಿಯಾಗಿರುತ್ತದೆ. ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 110 ಸೇತುವೆಗಳು ಹಾನಿಯಾಗಿರುತ್ತದೆ. 143 ಶಾಲಾ ಕಟ್ಟಡಗಳು, 118 ಅಂಗನವಾಡಿ ಕಟ್ಟಡಗಳು ಹಾಗೂ 9 ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿರುತ್ತವೆ. ಜಿಲ್ಲೆಯಲ್ಲಿ ಪ್ರವಾಹದಿಂದ 64 ಕೆರೆಗಳು ಹಾನಿಗೊಳಗಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...