ಶಿವಮೊಗ್ಗ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಾಲಕನ ಆಸೆಯಂತೆ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಶಿವಮೊಗ್ಗ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಎನ್ಆರ್ ಪುರ ರಸ್ತೆಯ ನಿವಾಸಿ ಪ್ರಸ್ತುತ ಶಿವಮೊಗ್ಗದ ಸೂಳೆಬೈಲ್ ನಲ್ಲಿ ವಾಸವಾಗಿರುವ ತಬ್ರೇಜ್ ಖಾನ್ ಅವರ ಪುತ್ರ ಎಂಟೂವರೆ ವರ್ಷದ ಆಜಾನ್ ಖಾನ್ 1ನೇ ತರಗತಿ ವಿದ್ಯಾರ್ಥಿಯಾಗಿದ್ದು, ಈ ಬಾಲಕ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾನೆ.
ಈ ಬಾಲಕನಿಗೆ ತಾನು ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆ ಇದೆ. ಆದ್ದರಿಂದ ಬಾಲಕನ ಮತ್ತು ಆತನ ಪೋಷಕರ ಕೋರಿಕೆ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ.ಕೆ. ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಇಂದು ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬಾಲಕ ಆಜಾನ್ ಖಾನ್ ನಿಗೆ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಾಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿಕೊಡಲಾಗಿದೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭುಮರಡ್ಡಿ, ಪೊಲೀಸ್ ಉಪಾಧೀಕ್ಷಕರಾದ ಬಾಲರಾಜ್, ಪ್ರಭು ಡಿ.ಟಿ., ಪೊಲೀಸ್ ನಿರೀಕ್ಷಕ ಅಂಜನ್ ಕುಮಾರ್, ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಬಾಲಕನ ಪೋಷಕರು ಉಪಸ್ಥಿತರಿದ್ದರು.
ಆಜಾನ್ ಖಾನ್ ಆಸೆಯಂತೆ ನಟ ಸುದೀಪ್ ಅವರನ್ನು ಭೇಟಿ ಮಾಡಿಸಿದ್ದ ಪೋಷಕರು ಈಗ ಶಿವಮೊಗ್ಗ ಪೊಲೀಸ್ ಇಲಾಖೆ ನೆರವಿನಿಂದ ಪೊಲೀಸ್ ಅಧಿಕಾರಿಯಾಗುವ ಆಸೆ ಈಡೇರಿಸಿದ್ದಾರೆ. ಪೊಲೀಸ್ ಅಧಿಕಾರಿ ಸಮವಸ್ತ್ರ ಧರಿಸಿದ್ದ ಬಾಲಕ ಸಾಂಕೇತಿಕವಾಗಿ ಡ್ಯೂಟಿ ಮಾಡಿದ್ದಾನೆ.