ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಕಲ್ಲುಕ್ವಾರೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಅವರು ಶುಕ್ರವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇಲ್ಲಿ ಕಲ್ಲು ಗಣಿಗಾರಿಕೆ ಅಧಿಕೃತವಾಗಿ ನಡೆಯುತ್ತಿತ್ತೇ ಅಥವಾ ಅನಧಿಕೃತವಾಗಿತ್ತೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಆದಷ್ಟು ಬೇಗನೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು. ಘಟನೆಯನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಲೋಪದೋಷಗಳನ್ನು ಪತ್ತೆಹಚ್ಚಲಾಗುವುದು. ಗಣಿಗಾರಿಕೆಗೆ ಸ್ಫೋಟಕ ಎಲ್ಲಿಂದ ಬಂತು, ಇದಕ್ಕೆ ಪರವಾನಿಗೆ ಇತ್ತೆ, ಸ್ಫೋಟಕ ಸಾಗಣಿಕೆಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆಯೇ ಎಂಬ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಂತಹ ದುರ್ಘಟನೆಗಳು ಆಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ರಾಜ್ಯದ ಅಭಿವೃದ್ಧಿಗೆ ಜಲ್ಲಿ ಕಲ್ಲುಗಳ ಪೂರೈಕೆ ಅನಿವಾರ್ಯ. ಆದರೆ, ಪರವಾನಿಗೆ ಇಲ್ಲದೆ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಅನಧಿಕೃತ ಗಣಿಗಾರಿಕೆ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
5 ಮಂದಿ ದುರ್ಮರಣ:
ಗುರುವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ 5 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಮುಖ್ಯಮಂತ್ರಿಯವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಈಗಾಗಲೇ ಘೋಷಿಸಿದ್ದಾರೆ. ಇನ್ನುಳಿದಂತೆ ಕಾರ್ಮಿಕ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮೃತರ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ಹಾಗೂ ಸಹಾಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದದು ತಿಳಿಸಿದ್ದಾರೆ.