ಶಿವಮೊಗ್ಗ: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸೀಫ್, ಸೈಯದ್ ನದೀಮ್ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ನಾಲ್ವರ ವಿಚಾರಣೆ ನಡೆಯುತ್ತಿದ್ದು, ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಉಳಿದ ನಾಲ್ವರು ಆರೋಪಿಗಳನ್ನು ಕೂಡ ನಂತರ ಬಂಧಿಸಲಾಗಿದ್ದು, ಇವರೆಲ್ಲರೂ ಶಿವಮೊಗ್ಗ ನಗರದ ನಿವಾಸಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇದುವರೆಗೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಇದುವರೆಗೆ 13 FIR ದಾಖಲಾಗಿದ್ದು, ಹರ್ಷ ಹತ್ಯೆ ಪ್ರಕರಣದ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ. ಎ1, ಎ2 ಆರೋಪಿಗಳನ್ನು ಶಿವಮೊಗ್ಗದಲ್ಲಿಯೇ ಬಂಧಿಸಲಾಗಿದೆ. ನಿನ್ನೆ ಗಲಾಟೆ ವೇಳೆ ಗಾಯಗೊಂಡಿದ್ದಾಗಿ ಆರು ಜನರು ದೂರು ನೀಡಿದ್ದಾರೆ. 18 ವಾಹನಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ ಎಂದರು.
ಶಿವಮೊಗ್ಗದಲ್ಲಿ 2000 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹತ್ಯೆಯಾಗಿರುವ ಹರ್ಷ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದವು. ಎ1, ಎ3, ಎ4, ಎ5 ಹರ್ಷನ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ. ಎ2, ಎ6 ಹಂತಕರಿಗೆ ಸಹಕಾರ ನೀಡಿದ್ದಾರೆ. ಒಟ್ಟು 12 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆರು ಜನರ ಪಾತ್ರ ಕಂಡು ಬಾರದ ಹಿನ್ನೆಲೆಯಲ್ಲಿ ಬಿಟ್ಟು ಕಳುಹಿಸಲಾಗಿದೆ ಎಂದು ಎಸ್ಪಿ ಬಿಎಂ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ.
ಎ1 ಕಾಸೀಫ್, ಎ2 ಸೈಯದ್ ನದೀಮ್, ಎ3 ಆಸೀಫ್ ವುಲ್ಲಾ ಖಾನ್, ಎ4 ರಿಹಾನ್ ಷರೀಫ್, ಎ5 ನಿಹಾಲ್, ಎ6 ಅಬ್ದುಲ್ ಅಫ್ನಾನ್ ಅವರನ್ನು ಬಂಧಿಸಲಾಗಿದೆ. ಬಂಧಿತ 6 ಆರೋಪಿಗಳ ಪೈಕಿ ನಾಲ್ವರು ಕ್ರಿಮಿನಲ್ ಹಿನ್ನಲೆಯವರಾಗಿದ್ದಾರೆ. ಗಲಭೆಯಲ್ಲಿ ಭಾಗಿಯಾದ ಅಪರಾಧ ಹಿನ್ನಲೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.