ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಿಟ್ಲುಗೋಡು ಸಮೀಪ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾಗಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಮೃತನ ಗುರುತು ಪತ್ತೆ ಮಾಡಿದ್ದಾರೆ. ಅಲ್ಲದೆ, ಆತನ ಕುಟುಂಬದ ಐದು ಮಂದಿಯನ್ನು ಬಂಧಿಸಿದ್ದಾರೆ. ಅಕ್ರಮ ಸಂಬಂಧವೇ ವ್ಯಕ್ತಿಯನ್ನು ಆತನ ಕುಟುಂಬದವರು ಕೊಲೆಮಾಡಲು ಕಾರಣವೆಂದು ಹೇಳಲಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಹುಣಸೆಕೊಪ್ಪ ಅರಣ್ಯಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸ್ವಿಫ್ಟ್ ಕಾರು ಪತ್ತೆಯಾಗಿದ್ದು, ಅದರಲ್ಲಿ ವ್ಯಕ್ತಿ ಮೃತದೇಹ ಕೂಡ ಸುಟ್ಟಿತ್ತು. ತೀರ್ಥಹಳ್ಳಿ ಪೊಲೀಸರು ತನಿಖೆ ಕೈಗೊಂಡಾಗ ಅದು ಸಾಗರ ತಾಲೂಕು ಆಚಾಪುರದ 45 ವರ್ಷದ ವಿನೋದ್ ಎನ್ನುವುದು ತಿಳಿದುಬಂದಿದೆ. ಹರ್ಬಲ್ ಲೈಫ್ ವ್ಯವಹಾರ ನಡೆಸುತ್ತಿದ್ದ ವಿನೋದ್ ಹೊಸನಗರ ತಾಲೂಕು ಬಟ್ಟೆಮಲ್ಲಪ್ಪದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ. ಇದರಿಂದಾಗಿ ಮನೆಯಲ್ಲಿ ಪತ್ನಿ-ಮಕ್ಕಳೊಂದಿಗೆ ಗಲಾಟೆಯಾಗಿತ್ತು.
ವಿನೋದ್ ದುಡಿದ ಹಣವನ್ನೆಲ್ಲಾ ಪತ್ನಿ, ಮಕ್ಕಳಿಗೆ ಕೊಡದೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ನೀಡುತ್ತಿದ್ದ. ಅಲ್ಲದೆ ಜಮೀನು ಮಾರಾಟ ಮಾಡಿ ಬಂದ ಲಕ್ಷಾಂತರ ರೂ. ಹಣವನ್ನು ಕೂಡ ಮಹಿಳೆಗೆ ಕೊಡಲು ಮುಂದಾಗಿದ್ದಾನೆ. ಇದರಿಂದ ಅಸಮಾಧಾನಗೊಂಡ ಕುಟುಂಬದವರುಕೊಲೆ ಮಾಡಿದ್ದಾರೆ.
ವಿನೋದ್ ಪತ್ನಿ, ಇಬ್ಬರು ಪುತ್ರರು, ಪತ್ನಿಯ ಅಕ್ಕನ ಮಗ ಹಾಗೂ ವಿನೋದ್ ಸಹೋದರ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಸೆಪ್ಟಂಬರ್ 25 ರಂದು ಹತ್ಯೆಗೆ ಸಂಚು ರೂಪಿಸಿದ್ದು, ಮರುದಿನ ಆನಂದಪುರದ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿದ್ದಾರೆ. ವಿನೋದ್ ಕುತ್ತಿಗೆಗೆ ಕಬ್ಬಿಣದ ತಂತಿಯಿಂದ ಬಿಗಿದು ಉಸಿರುಗಟ್ಟಿಸಿ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಮನೆಯಲ್ಲಿಯೇ ಬಿಟ್ಟು, ಕಾರ್ ನಲ್ಲಿ ವಿನೋದ್ ಮೃತದೇಹವನ್ನು ತೀರ್ಥಹಳ್ಳಿ ತಾಲ್ಲೂಕಿನ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ವಿನೋದ್ ನವನ್ನು ಡ್ರೈವಿಂಗ್ ಸೀಟಿನಲ್ಲಿ ಕೂರಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕಾರ್ ನಂಬರ್ ಪ್ಲೇಟ್ ತೆಗೆದು ಬಿಸಾಕಿದ್ದಾರೆ. ಕಾಡಿನೊಳಗೆ ಆತನ ಮೊಬೈಲ್ ಎಸೆದಿದ್ದಾರೆ. ಮನೆಯಲ್ಲಿ ಕೊಲೆ ಮಾಡಿದ ಸ್ಥಳದಲ್ಲಿ ಗುರುತು ಸಿಗದಂತೆ ಪಿನಾಯಿಲ್ ನಿಂದ ಕ್ಲೀನ್ ಮಾಡಿದ್ದಾರೆ. ತೊಟ್ಟಿದ್ದ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ.
ತನಿಖೆ ಕೈಗೊಂಡ ಪೊಲೀಸರು ಕುಟುಂಬದ ಸದಸ್ಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಬೇರೆ ಬೇರೆ ಹೇಳಿಕೆಗಳು ಬಂದಿದೆ. ಬಳಿಕ ಕೊಲೆ ಮಾಡಿರುವ ಬಗ್ಗೆ ತಿಳಿಸಿದ್ದು, 5 ಮಂದಿಯನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.