ಶಿವಮೊಗ್ಗ: ಸೋದರತ್ತೆಯ ಸಾವಿನ ಸುದ್ದಿ ಕೇಳಿ ಅಳಿಯನೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಜೋಗ ಫಾಲ್ಸ್ ಸಮೀಪದ ಲಿಂಗನಮಕ್ಕಿಯಲ್ಲಿ ಭಾನುವಾರ ನಡೆದಿದೆ.
ಲಿಂಗನಮಕ್ಕಿಯ ಲಕ್ಷ್ಮಮ್ಮ(58) ಸಂಬಂಧಿಕರ ಮನೆಗೆ ಬೆಂಗಳೂರಿಗೆ ಬಸ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸಾಗರ ತಾಲ್ಲೂಕಿನ ಆನಂದಪುರ ಬಳಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಪ್ರಯಾಣದ ವೇಳೆ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲೇ ಅವರು ಮೃತಪಟ್ಟಿದ್ದು, ಬಸ್ ಕಂಡಕ್ಟರ್ ಈ ವಿಷಯವನ್ನು ಲಕ್ಷ್ಮಮ್ಮ ಅವರ ಅಳಿಯ ಗುಲ್ಪತ್ ಸಿಂಗ್(54) ಅವರಿಗೆ ಕರೆ ಮಾಡಿ ತಿಳಿಸಿದ್ದು, ವಿಷಯ ತಿಳಿದು ಆಘಾತಕ್ಕೆ ಒಳಗಾದ ಗುಲ್ಪತ್ ಸಿಂಗ್ ಮೃತಪಟ್ಟಿದ್ದಾರೆ.
ಅತ್ತೆಯ ಸಾವಿನ ಸುದ್ದಿ ಕೇಳಿ ಅವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಗುಲ್ಪತ್ ಸಿಂಗ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಲಿಂಗನಮಕ್ಕಿಯ ರುದ್ರಭೂಮಿಯಲ್ಲಿ ಅತ್ತೆ ಹಾಗೂ ಇಬ್ಬರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.