
ಶಿವಮೊಗ್ಗ: ಪತಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಯ ಮೊಬೈಲ್ ಕಸಿದು ಚಾಕು ತೋರಿಸಿ ಬೆದರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಪಿ ಅಂಡ್ ಟಿ ಕಾಲೋನಿ ನಿವಾಸಿಗಳಾಗಿರುವ ದಂಪತಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿ ಕುಳಿತಿದ್ದ ಪತ್ನಿ ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದರು. ರೈಲ್ವೆಗೇಟ್ ಬಳಿ ಬೈಕ್ ನಲ್ಲಿ ಅವರನ್ನು ಹಿಂಬಾಲಿಸಿ ಬಂದಿದ್ದ ದುಷ್ಕರ್ಮಿ ಅವರ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಿದ್ದಾನೆ. ಆತನ ಬೈಕ್ ಹಿಂಬಾಲಿಸುತ್ತಿದ್ದಂತೆ ಚಾಕು ತೋರಿಸಿ ಬೆದರಿಸಿದ್ದಾನೆ. ಆತಂಕಗೊಂಡ ದಂಪತಿ ವಿನೋಬನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆಯಿಂದ ಮೊಬೈಲ್ ಕಸಿದು ದಂಪತಿಗೆ ಚಾಕುವಿನಿಂದ ಬೆದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸೊದ್ದಾರೆ. ಬಂಧಿತನಿಂದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ.