ಶಿವಮೊಗ್ಗ: ನವೆಂಬರ್ 1 ರಂದು ಮಾತ್ರ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಕನ್ನಡ ಉಳಿದಂತಾಗುವುದಿಲ್ಲ. ಕನ್ನಡ ಪ್ರತಿಯೊಬ್ಬರ ಮನ-ಮನೆಗಳ ಉಸಿರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ನಿರ್ವಹಣಾಧಿಕಾರಿ ಹೇಮಂತ್ ಎನ್. ಆಶಿಸಿದರು.
ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಡಿಎಆರ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು.
ಅನ್ಯಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ, ಬೇರೆ ಭಾಷೆ ಕಲಿತು ಕನ್ನಡ ಮರೆಯಬಾರದು. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಎಂಬ ಕುವೆಂಪು ಅವರ ಸಾಲುಗಳನ್ನು ಯಾವಾಗಲೂ ನೆನಪಿಸಿಕೊಳ್ಳಲೇಬೇಕು. ಈ ಸಂದರ್ಭದಲ್ಲಿ ಇಲ್ಲಿನ ನಾಡು-ನುಡಿ, ನೆಲ-ಜಲ ಭಾಷೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಪತ್ತನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ನಾಡಿನ ಸಮಸ್ತ ಪ್ರಜೆಗಳ ಪಾತ್ರವೂ ಪ್ರಮುಖವಾದುದ್ದಾಗಿದೆ ಎಂದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದಲ್ಲೇ ಪ್ರಮುಖ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ 2000ವರ್ಷಗಳಿಗೂ ಮಿಗಿಲಾದ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿವರೆಗೆ ಈ ನಾಡಿನ ಖ್ಯಾತಿ ವ್ಯಾಪಿಸಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅಲ್ಲದೇ ಕನ್ನಡ ಭಾಷೆಯಲ್ಲಿ ದೊರಕುವ ಸಾಹಿತ್ಯ ಕೃತಿಗಳು, ಐತಿಹಾಸಿಕ ದಾಖಲೆಗಳು ನಾಡಿನ ಶ್ರೀಮಂತ ಸಂಸ್ಕೃತಿಗೆ ಸಾಕ್ಷಿಯಾಗಿವೆ. ಪಂಪ. ರನ್ನ ಜನ್ನರ ಕಾವ್ಯದ ಸೊಗಸು ಕಾಲವನ್ನು ಮೆಟ್ಟಿ ತಮ್ಮ ಚಿರಂತನತೆಯನ್ನು ಮರೆಯುತ್ತಿದೆ. ಬೇಲೂರು, ಹಳೇಬೀಡು, ಬಾದಾಮಿ ಐಹೊಳೆ ಪಟ್ಟದಕಲ್ಲು ಮುಂತಾದ ಕಡೆಗಳಲ್ಲಿ ಶಿಲ್ಪಕಲೆಯು ಕಾವ್ಯವಾಗಿ ಮೈದಳೆದಿರುವುದನ್ನು ಗಮನಿಸಬಹುದಾಗಿದೆ ಎಂದರು.
ಭಾಷೆಯ ಅಭಿರುಚಿಯನ್ನು ಜನರಲ್ಲಿ ಹೆಚ್ಚಿಸಿ, ಅದನ್ನು ಉಳಿಸಿಕೊಳ್ಳಬೇಕು. ಪ್ರಮುಖವಾಗಿ ಭಾಷೆಯ ಪ್ರಭಾವಶಾಲಿ ಚಲನೆ ಇರುವುದು ವಿವಿಧ ಮಾಧ್ಯಮ ಮತ್ತು ಶಾಲೆಗಳಲ್ಲಿ. ಮಾಧ್ಯಮ ಮತ್ತು ಶಾಲೆಗಳಲ್ಲಿ ಕನ್ನಡದ ಬಗ್ಗೆ ಅಭಿರುಚಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಜಾಗತೀಕರಣದ ಹಿನ್ನೆಲೆಯಲ್ಲಿ ಇಂಗ್ಲೀಷ್ ಭಾಷಾ ಜ್ಞಾನ ಅವಶ್ಯಕವಾಗಿದ್ದರೂ ಎಂದಿಗೂ ಮಾತೃಭಾಷೆ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಶಿಕ್ಷಣ ನೀತಿಯೂ ಮಾತೃಭಾಷೆಗೆ ಹೆಚ್ಚಿನ ಒತ್ತನ್ನು ನೀಡಿದ್ದರೂ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ನಮ್ಮೆಲ್ಲರ ಜಬಾಬ್ದಾರಿ ಇದೆ ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ ಚಂದ್ರಗುತ್ತಿ ರೇಣುಕಾದೇವಿಯ ಸ್ತಬ್ದಚಿತ್ರ, ಕೆಎಸ್ಆರ್ಟಿಸಿಯಿಂದ ಪ್ರವಾಸಿ ತಾಣಗಳ ಸ್ತಬ್ದಚಿತ್ರ, ಆರೋಗ್ಯ ಇಲಾಖೆಯಿಂದ ವಿವಿಧ ಯೋಜನೆಗಳ ಮಾಹಿತಿಯುಳ್ಳ, ಅಲ್ಪಸಂಖ್ಯಾತ ಇಲಾಖೆ ಯೋಜನೆಗಳ ಅರಿವು ಮೂಡಿಸುವ, ಕೃಷಿ ಇಲಾಖೆಯಿಂದ ವೈಜ್ಞಾನಿಕ ಮಾಹಿತಿ ನೀಡುವ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಸಖಿ ಒನ್ ಸ್ಟಾಪ್ ಸೆಂಟರ್, ಸಮಾಜ ಕಲ್ಯಾಣ ಇಲಾಖೆ, ಪಾಲಿಕೆ, ಪೊಲೀಸ್ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ವಿಶೇಷ ಮಾಹಿತಿಯುಳ್ಳ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಲಾಯಿತು. ಡೊಳ್ಳು ಕುಣಿತ, ವೀರಗಾಸೆ ಹಾಗೂ 3 ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಕುರಿತು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು
ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಎಸಿ ಸತ್ಯನಾರಾಯಣ, ತಹಶೀಲ್ದಾರ್ ಗಿರೀಶ್, ಅಧಿಕಾರಿಗಳು, ಕನ್ನಡ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.