ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲಲ್ಲಿ ಮತ್ತೆ ಕಿಡಿಗೇಡಿ ಕೃತ್ಯ ಕಂಡು ಬಂದಿದೆ. ಶಾಂತವಾಗಿದ್ದ ಶಿವಮೊಗ್ಗದಲ್ಲಿ ‘ಜಾಯಿನ್ ಸಿಎಫ್ಐ’ ಎನ್ನುವ ಗೋಡೆ ಬರೆದು ಸಮಾಜದ ಸ್ವಾಸ್ಥ್ಯ ಕದಡಲು ಕಿಡಿಗೇಡಿಗಳು ಮುಂದಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ವಿವಿಧ ಕಡೆಗಳಲ್ಲಿ ಕಿಡಿಗೇಡಿಗಳು ಜಾಯಿನ್ ಸಿಎಫ್ಐ ಎಂಬ ಗೋಡೆ ಬರಹ ಬರದಿದ್ದಾರೆ. ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶಿರಾಳಕೊಪ್ಪ ಪಟ್ಟಣದ ಹಳೆ ಪೆಟ್ರೋಲ್ ಬಂಕ್ ಪಕ್ಕದ ಸಿಮೆಂಟ್ ಕಾಂಪೌಂಡ್, ಭೋವಿ ಕಾಲೋನಿಗೆ ತೆರಳುವ ರಸ್ತೆಯ ವಿದ್ಯುತ್ ಕಂಬ, ದೊಡ್ಡ ಬ್ಯಾಣದಕೇರಿಯ ಸಿಮೆಂಟ್ ಬೋರ್ಡ್ ಸೇರಿದಂತೆ ಹಲವು ಕಡೆಗಳಲ್ಲಿ ಜಾಯಿನ್ ಸಿಎಫ್ಐ ಎಂದು ಕಿಡಿಗೇಡಿಗಳು ಬರೆದಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರು ಇದನ್ನು ಗಮನಿಸಿ ಅಳಿಸಿಹಾಕಿದ್ದಾರೆ. ಈ ರೀತಿ ಬರೆದವರ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.