ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಜಿಲ್ಲೆಯ ಜನರು ತತ್ತರಿಸಿಹೋಗಿದ್ದಾರೆ. ಮಳೆಯಿಂದಾಗಿ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ.
ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೊಸನಗರ ತಾಲೂಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹೊಸನಗರ ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ನಾಳೆಯೂ ವರುಣಾರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್, ಜುಲೈ 16ರಂದು ತಾಲೂಕಿನಾದ್ಯಂತ ಎಲ್ಲಾ ಅಂಗನಾವಾಡಿ, ಖಾಸಗಿ ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಹವಾಮಾನ ಇಲಾಖೆ ನಾಳೆ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸನಗರ ತಾಲೂಕಿನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಬಿಇಒ ಹೆಚ್.ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಇನ್ನು ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ,ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.