ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಸಂಜೆ ಹೊತ್ತಿಗೆ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಶಿವಮೊಗ್ಗ, ಭದ್ರಾವತಿಯ ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಹೆದ್ದಾರಿಗಳ ಮೇಲೆಯೂ ಎರಡು ಅಡಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಶಿವಮೊಗ್ಗದ ಬೈಪಾಸ್ ರಸ್ತೆ, ಎನ್.ಟಿ. ರಸ್ತೆ, ವಾದಿ ಎ ಹುದಾ, ಆರ್.ಎಂ.ಎಲ್. ನಗರ ಸೇರಿದಂತೆ ಹಲವೆಡೆ ಮಳಿಗೆಗಳು, ಮನೆಗಳಿಗೆ ನೀರು ನುಗ್ಗಿದೆ. ಬೈಪಾಸ್ ರಸ್ತೆಯ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಹೆದ್ದಾರಿಗೂ ನೀರು ನುಗ್ಗಿದೆ. ಇದರಿಂದಾಗಿ ಜನ ಪರದಾಡುವಂತಾಗಿದೆ.
ಭದ್ರಾವತಿಯಲ್ಲಿ ಅಂಡರ್ ಬ್ರಿಡ್ಜ್ ಸರ್ಕಲ್, ಬೈಪಾಸ್ ಬಿಳಕಿ ಕ್ರಾಸ್ ಬಳಿ ಭಾರಿ ಪ್ರಮಾಣದ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಗಿದೆ. ಹಲವು ಕಡೆ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಮಳೆ ಆರ್ಭಟ ಮುಂದುವರೆದಿದ್ದು, ವರಮಹಾಲಕ್ಷ್ಮಿ ಹಬ್ಬದ ಖರೀದಿಗೆ ಹೋದವರು, ಮಾರಾಟಗಾರರು, ಕೆಲಸ ಮುಗಿಸಿ ಮನೆಗೆ ತೆರಳುವವರು ಪರದಾಡುವಂತಾಗಿದೆ.