ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆ ಆರ್ಭಟ ಮುಂದುವರೆದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸತತವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಕಾರಣ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವಕಾಲೇಜು, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು, ಐಟಿಐ ಮತ್ತು ಡಿಪ್ಲೋಮೋ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಿ ಮಾನ್ಯ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ಆದೇಶ ಹೊರಡಿಸಿದ್ದಾರೆ
ಕೊಡಗು ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ವೆಂಕಟರಾಜಾ ರಜೆ ಘೋಷಣೆ ಮಾಡಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರಜೆ ಇರುವುದಿಲ್ಲ.
ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದ ಹಿನ್ನೆಲೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ಮಾತ್ರ ಶುಕ್ರವಾರ ರಜೆ ನೀಡಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶಿಸಿದ್ದಾರೆ.
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಖಾನಾಪುರ ತಾಲೂಕಿನ ಶಾಲಾ, ಕಾಲೇಜುಗಳಿಗೆ ಎರಡು ದಿನ ರಜೆ ನೀಡಲಾಗಿದೆ. ಇಂದು ಮತ್ತು ನಾಳೆ ರಜೆ ನೀಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಆರು ತಾಲೂಕಿನ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು ತಾಲೂಕಿನ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ. ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.