ಶಿವಮೊಗ್ಗ: ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಿದ್ದು, ಜನರ ಬದುಕು ಅಯೋಮಯವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ 5 ಮನೆಗಳು ಕುಸಿದು ಬಿದ್ದಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅವಾಂತರದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿವೆ. ಧಾರಾಕಾರ ಮಳೆಯಿಂದಾಗಿ ತುಂಗಾ ಕಾಲುವೆ ಉಕ್ಕಿ ಹರಿಯುತ್ತಿದ್ದು, ವಿನೋಬಾನಗರದ ಮೊದಲ ಹಂತದಲ್ಲಿ 5 ಮನೆಗಳು ಕುಸಿದು ಬಿದ್ದಿವೆ.
ರಾಜಕಾಲುವೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ವೆಂಕಟೇಶ ನಗರದ ಐದು ಕ್ರಾಸ್ ಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಮನೆಗಳಲ್ಲಿ ಮೂರು ಅಡಿಯಷ್ಟು ನೀರು ನಿಂತಿದೆ. ಮನೆಗಳಲ್ಲಿರುವ ದಿನಸಿ ಸಾಮಾನುಗಳು ನೀರುಪಾಲಾಗಿದ್ದು, ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಗೋಪಾಲ ಬಡಾವಣೆ ಜಲಾವೃತಗೊಂಡಿದ್ದು ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಮಳೆಯಿಂದಾಗಿ ಪರ್ವೀನ್ ತಾಜ್ ಚಾನೆಲ್ ಏರಿಯಾ 18ನೇ ವಾರ್ಡ್ 7ನೇ ಕ್ರಾಸ್ ನ ಲ್ಲಿನ ಶಾಂತಮ್ಮ ಮೋಹನ್ ಎಂಬುವವರ ಮನೆ ಕುಸಿದು ಬಿದ್ದಿದೆ. ಗಾಜನೂರು ಸಕ್ರೆಬೈಲ್ ಬಳಿಯ ಫಿಶ್ ಹೋಟೆಲ್ ಜಲಾವೃತಗೊಂಡಿದೆ. ಶಿವಮೊಗ್ಗ ಹಾಗೂ ಸವಳಂಗ ಮಾರ್ಗದಲ್ಲಿ ರಸ್ತೆ ಮೇಲೆ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ತುಂಗಾ ಕಾಲುವೆ ಅಬ್ಬರಕ್ಕೆ ನವೋದಯ ಶಾಲೆ ಬಳಿ ನೀರು ಉಕ್ಕಿ ಹರಿಯುತ್ತಿದ್ದು, ಅಡಿಕೆ ತೋಟಗಳು ಸಂಪೂರ್ಣ ನೀರಿನಿಂದ ತುಂಬಿದೆ. ಭತ್ತದ ಗದ್ದೆಗಳು, ತೋಟಗಳು ಜಲಾವೃತಗೊಂಡಿದ್ದು, ಜನರು ಬದುಕು ಮೂರಾಬಟ್ಟೆಯಾಗಿದೆ.