alex Certify ಕರಕುಶಲ ಕಲಾವಿದರಿಗೆ ಶಾಶ್ವತ ಮಳಿಗೆ ಸ್ಥಾಪಿಸಲು ಒತ್ತಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರಕುಶಲ ಕಲಾವಿದರಿಗೆ ಶಾಶ್ವತ ಮಳಿಗೆ ಸ್ಥಾಪಿಸಲು ಒತ್ತಾಯ

ಶಿವಮೊಗ್ಗ: ವೈವಿಧ್ಯಮಯ ಕರಕುಶಲ ಮತ್ತು ಫಲಪುಷ್ಪಗಳ ಜಗತ್ತು ಇಲ್ಲಿ ಸೃಷ್ಟಿಯಾಗಿದೆ. ಕರಕುಶಲ ಕಲಾವಿದರಿಗೆ ಶಾಶ್ವತವಾಗಿ ಮಾರುಕಟ್ಟೆ ಒದಗಿಸಲು ಮಾಲ್‌ನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ. ಇದಕ್ಕೆ ನಮ್ಮ ಸಹಕಾರ ಸಹ ಇದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಜಿಲ್ಲಾ ಪಂಚಾಯತ್, ತೊಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಹಯೋಗದಲ್ಲಿ ಅಲ್ಲಮಪ್ರಭು ಉದ್ಯಾನವನ(ಫ್ರೀಡಂ ಪಾರ್ಕ್) ಇಲ್ಲಿ ದಿ: 24-01-2025 ರಿಂದ 26-01-2025 ರವರೆಗೆ ಏರ್ಪಡಿಸಲಾಗಿರುವ ಮಲೆನಾಡ ಕರಕುಶಲ ಉತ್ಸವ ಸರಸ್ ಮೇಳ ಹಾಗೂ ಪುಷ್ಪಸಿರಿ ಫಲಪುಷ್ಪ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿ.ಪಂ. ಸಿಇಒ ಹೇಮಂತ್ ಅವರ ಮಲೆನಾಡ ಕರಕುಶಲ ಉತ್ಸವದ ಕನಸು ಇಂದು ನನಸಾಗಿದೆ. ಇಚ್ಚಾಶಕ್ತಿ ಇರುವ ಅಧಿಕಾರಗಳಿಂದ ಮಾತ್ರ ಇದು ಸಾಧ್ಯ .ಇಂತಹ ಕಾರ್ಯಕ್ರಮವನ್ನು ನೆನಪು ಮಾಡಿಕೊಂಡಾಗೆಲ್ಲಾ ಕರಕುಶಲ ಕಲಾವಿದರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ಕೊರಗಿತ್ತು. ಆದರೆ ಇವತ್ತು ಅದಕ್ಕೆ ನ್ಯಾಯ ಸಿಕ್ಕಿದೆ ಎಂದೆನಿಸುತ್ತಿದೆ.

ಕರಕುಶಲ ಮತ್ತು ಫಲ ಪುಷ್ಪ ಇವೆರಡು ವರ್ತಮಾನದಲ್ಲಿ ಅಗತ್ಯವಾಗಿದೆ. ಕಲಾವಿದರು ತಮ್ಮ ಕಲೆಯ ಮೂಲಕ ನಮ್ಮ ಸಂಸ್ಕೃತಿಯ ಅನಾವರಣ ಮಾಡಿದ್ದಾರೆ. ಶಾಲಾ ಮಕ್ಕಳು ಕೂಡ ಬಂದು ಕಲಾಕೃತಿಗಳನ್ನು ನೋಡಿ ಸಂತಸ ಪಡುತ್ತಿದ್ದಾರೆ. ಮೂರು ದಿನಗಳ ಕಾಲ ನಾಗರೀಕರು ಇಂತಹ ಪ್ರದರ್ಶನದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕೃತಿಗಳು, ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳಾದ ಟೆರಾಕೊಟ, ಹಸೆ ಚಿತ್ತಾರ, ರೇಶಿಮೆ, ಬಿದಿರು, ರೈತರು ಬೆಳೆದ ಫಲ-ಪುಷ್ಪಗಳು, ರಾಷ್ಟçಕವಿ ಕುವೆಂಪುರವರ ಪುಸ್ತಕ ಪ್ರದರ್ಶನ ತುಂಬಾ ವಿಶೇಷವಾಗಿದೆ. ಈ ಉತ್ಸವ 3 ದಿನಗಳ ಕಾಲ ಯಶಸ್ವಿಯಾಗಿ ನಡೆಯಲಿ ಎಂದ ಅವರು ಹಿಂದೆ ಜಿಲ್ಲೆಯಲ್ಲಿ ನಡೆಸಿದ್ದ ಕೊಡಚಾದ್ರಿ ಉತ್ಸವವನ್ನು ನೆನೆದರು. ಆಗ ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸಲು 400 ಮಳಿಗೆಗಳನ್ನು ತೆರೆದು 7 ದಿನಗಳ ಕಾಲ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿತ್ತು ಎಂದರು. ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕು. ನಾವೆಲ್ಲ ಇಲ್ಲಿನ ಉತ್ಪನ್ನಗಳನ್ನು ಕೊಂಡಕೊಳ್ಳುವುದರ ಮೂಲಕ ಇವರೆಲ್ಲರನ್ನು ಸಹಕರಿಸೊಣ ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಹೇಮಂತ್ ಎನ್. ಮಾತನಾಡಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ, ಜಿ.ಪಂ. ಯೋಜನಾ ನಿರ್ದೇಶಕಿ ನಂದಿನಿ, ಉದ್ಯಾನ ಕಲಾ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.

ಮಲೆನಾಡ ಕರಕುಶಲ ಉತ್ಸವ ಹಾಗೂ ಫಲಪುಷ್ಪ ಮೇಳದಲ್ಲಿ ಬೆಳಿಗ್ಗಿನಿಂದಲೇ ಸಾರ್ವಜನಿಕರು, ವಿದ್ಯಾರ್ಥಿಗಳು ಬಂದು ಭೇಟಿ ನೀಡುತ್ತಿದ್ದರು. ಮೇಳದ ಮುಂಭಾಗ ಐ ಲವ್ ಶಿವಮೊಗ್ಗ, ಚಂದ್ರಗುತ್ತಿ ದೇವಾಲಯ ಹಾಗೂ ಕವಿಶೈಲದ ಕಲಾಕೃತಿಗಳ ಮುಂದೆ ಜನರು, ವಿದ್ಯಾರ್ಥಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದರು.

ಉತ್ಸವದಲ್ಲಿ ರೈತರು ಬೆಳೆದ ವಿವಿಧ ಫಲ-ಪುಷ್ಪಗಳು, ಕರಕುಶಲ ಮಳೆಗೆಗಳಾದ ಮಲೆನಾಡ ಕರಕುಶಲತೆಗಳು, ಸಹ್ಯಾದ್ರಿ ಕರಕುಶಲತೆ, ಬಂಜಾರ ಲಂಬಾಣಿ ಉಡುಪು, ಕಲ್ಲಿನ ಆಭರಣಗಳು, ಮಲೆನಾಡು ಸವಿರುಚಿ ತಿನಿಸು, ಅಕ್ಕ ಕೆಫೆ, ಮ್ಯೂರಲ್ ಕಲಾ ಚಿತ್ರಗಳು, ಹಸೆ ಚಿತ್ತಾರೆ, ಮಣ್ಣಿನ ಅಲಂಕಾರಿಕ ಮಳಿಗೆ, ಸ್ವದೇಶಿ, ಕೌದಿ, ಈಚಲು ಚಾಪೆ, ಮರದ ಉತ್ಪನ್ನಗಳು, ಟೆರಾಕೋಟ, ಖಾದಿ ಉಡುಪುಗಳು ಸೇರಿದಂತೆ ಒಳಾಂಗಣದಲ್ಲಿ 30 ಕ್ಕೂ ಹೆಚ್ಚು ಮಳಿಗೆ ಹಾಗೂ ಹೊರಾಂಗಣದಲ್ಲಿ ನರ್ಸರಿ ಗಿಡಗಳು, ವಿವಿಧ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳು, ತಿಂಡಿ-ತಿನಿಸು, ಸೀರೆ-ಬಟ್ಟೆ ಇನ್ನೂ ವಿವಿಧ ರೀತಿಯ 20 ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...