ಶಿವಮೊಗ್ಗ: ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಖಜಾನೆ ಹಣಕಾಸು ಪರಿಸ್ಥಿತಿ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕೆಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಆಗ್ರಹಿಸಿದರು.
ಇಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಹಣಕಾಸು ಪರಿಸ್ಥಿತಿ ತುಂಬ ಕೆಟ್ಟದ್ದಾಗಿದೆ. ನೀರಾವರಿ ಸೇರಿದಂತೆ ಯಾವ ಯೋಜನೆಗಳಿಗೂ ಬಿಡಿಗಾಸು ನೀಡಿಲ್ಲ. ಸಿದ್ಧರಾಮಯ್ಯ ಅವರ ಸರ್ಕಾರದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕ್ಷೇತ್ರವಾರು ಬಿಡುಗಡೆ ಮಾಡಿದ್ದ ಹಣವನ್ನು ಹಿಂಪಡೆಯುತ್ತಿದೆ. ಎಸ್.ಸಿ., ಎಸ್.ಟಿ. ಯೋಜನೆಗಳಿಗೆ ಮೀಸಲಾದ ಹಣವನ್ನು ಕೂಡ ವಾಪಸ್ ಪಡೆಯಲಾಗುತ್ತಿದೆ. ಹಾಗಾಗಿ, ಸಾರ್ವಜನಿಕರಿಗೆ ಹಣಕಾಸಿನ ಸ್ಥಿತಿಗೆ ಸಂಬಂಧಿಸಿದಂತೆ ನೈಜ ಮಾಹಿತಿ ನೀಡಲು ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿವೆ. ಇದರಿಂದ ರೈತ ಸಂಕುಲವೇ ಸಂಕಷ್ಟಕ್ಕೆ ಈಡಾಗಿದೆ ಎಂದು ದೂರಿದರು. ರೈತರ ಪ್ರತಿಭಟನೆ 50 ದಿನ ದಾಟಿದೆ. 9 ಸುತ್ತಿನ ಮಾತುಕತೆ ನಡೆದಿದೆ. ಆದರೂ ಸಂಧಾನ ಸಭೆ ವಿಫಲವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸುಮ್ಮನಾಗಿರುವುದನ್ನು ನೋಡಿದರೆ, ಇದು ರೈತ ವಿರೋಧಿ ಸರ್ಕಾರವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.