ಬೆಂಗಳೂರು: ಶಿವಮೊಗ್ಗ, ವಿಜಯಪುರದಲ್ಲಿ ಆಹಾರ ಪಾರ್ಕ್ ಗಳನ್ನು ಹೊಸದಾಗಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಟಿ.ಬಿ. ಜಯಚಂದ್ರ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜನಕ್ಕೆ ಅಗತ್ಯವಿರುವ ಆಹಾರ ಪಾರ್ಕ್ ಗಳ ನಷ್ಟದ ಬಗ್ಗೆ ಸಂಬಂಧಿಸಿದವರೊಂದಿಗೆ ಚರ್ಚಿಸಲಾಗುವುದು. ಇದರೊಂದಿಗೆ ಶಿವಮೊಗ್ಗದ ಸೋಗಾನೆ ಮತ್ತು ವಿಜಯಪುರದ ಇಟ್ಟಂಗಿಹಾಳದಲ್ಲಿ ಹೊಸದಾಗಿ ಆಹಾರ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ನಾಲ್ಕು ಆಹಾರ ಪಾರ್ಕ್ ಗಳಿವೆ. ಮಾಲೂರು ಪಾರ್ಕ್ ಕೊರತುಪಡಿಸಿ ಉಳಿದವು ನಷ್ಟದಲ್ಲಿವೆ ಎನ್ನುವ ಮಾಹಿತಿ ಇದ್ದು, ಅವುಗಳ ಬಲವರ್ಧನೆಗೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸಲಾಗುವುದು. ಇದರೊಂದಿಗೆ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ರಫ್ತು ಜನಕ್ಕೆ ಎರಡು ಹೊಸ ಆಹಾರ ಪಾರ್ಕ್ ಗಳ ಸ್ಥಾಪಿಸಲು ಆದೇಶಿಸಲಾಗಿದ್ದು, ಶೀಘ್ರವೇ ಅವುಗಳ ಸ್ಥಾಪನೆ ಸಂಬಂಧಿತ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.