ನವದೆಹಲಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಶಿವಮೊಗ್ಗದಲ್ಲಿ ಮಾರ್ಚ್ 20 ರಂದು ರಾಜ್ಯದ ಮೊದಲ ‘ರೈತರ ಮಹಾ ಪಂಚಾಯತ್’ ನಡೆಯಲಿದೆ.
ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಐಕ್ಯ ಹೋರಾಟ ಸಂಘಟನೆ ಶಿವಮೊಗ್ಗದಲ್ಲಿ ರೈತ ಮಹಾ ಪಂಚಾಯತ್ ಆಯೋಜಿಸಿದೆ. ರಾಜ್ಯದ ಮೂರು ಸ್ಥಳಗಳಲ್ಲಿ ಮಹಾ ಪಂಚಾಯತ್ ನಡೆಯಲಿದೆ. ಶಿವಮೊಗ್ಗ, ಹಾವೇರಿ, ಬೆಳಗಾವಿಯಲ್ಲಿ ರೈತ ಮಹಾ ಪಂಚಾಯತ್ ನಡೆಸಲಾಗುವುದು.
ದೆಹಲಿಗೆ ತೆರಳಿರುವ ರಾಜ್ಯದ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ನಾಯಕರು ಹಾಗೂ ರಾಜಕೀಯ ಮುಖಂಡರು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಅವರಿಗೆ ಶಿವಮೊಗ್ಗ ಮಹಾ ಪಂಚಾಯತ್ ಗೆ ಆಗಮಿಸಲು ಆಹ್ವಾನ ನೀಡಿದ್ದಾರೆ.
ದೆಹಲಿಯ ಗಾಜಿಯಾಬಾದ್ ರೈತ ಹೋರಾಟದ ಮುಖ್ಯವೇದಿಕೆಯಲ್ಲಿ ರಾಕೇಶ್ ಟಿಕಾಯತ್ ಅವರಿಗೆ ಮಾರ್ಚ್ 20 ರಂದು ಶಿವಮೊಗ್ಗದ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಲಾಯಿತು. ಅದೇ ರೀತಿ ಹರಿಯಾಣ -ದೆಹಲಿ ಸಿಂಘು ಬಾರ್ಡರ್ ನಲ್ಲಿ ರೈತ ಹೋರಾಟದ ಮುಖ್ಯ ರೂವಾರಿಗಳಲ್ಲಿ ಒಬ್ಬರಾದ ಡಾ. ದರ್ಶನ್ ಪಾಲ್ ಮತ್ತು ಜಗಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಶಿವಮೊಗ್ಗದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಸಂಘಟನೆ ಹಾಗೂ ರಾಜಕೀಯ ಮುಖಂಡರಾದ ಎಂ. ಶ್ರೀಕಾಂತ್, ಕೆ.ಪಿ. ಶ್ರೀಪಾಲ್, ಹೆಚ್.ಸಿ. ಯೋಗೀಶ್, ಟಿ.ಹೆಚ್. ಹಾಲೇಶಪ್ಪ, ಕೆ.ಎಲ್. ಅಶೋಕ್, ಎನ್.ರಮೇಶ್ ಮೊದಲಾದವರಿದ್ದರು.