ಶಿವಮೊಗ್ಗ: ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆತಿದೆ. ಸಕ್ರೆಬೈಲು ಬಿಡಾರದ ಆನೆ ಸಾಗರ ನೇತೃತ್ವದಲ್ಲಿ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ.
ಶಿವಪ್ಪ ನಾಯಕ ಅರಮನೆ ಸಮೀಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಜಂಬೂಸವಾರಿಗೆ ಚಾಲನೆ ನೀಡಲಾಗಿದೆ.
ಸುಮಾರು 450 ಕೆಜಿ ತೂಕದ ಬೆಳ್ಳಿಯ ಅಂಬಾರಿ ಹೊತ್ತು ಸಾಗರ ಆನೆ ಸಾಗಿದೆ. ಸಚಿವ ಮಧು ಬಂಗಾರಪ್ಪ ದಂಪತಿ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಬಲ್ಕಿಶ್ ಬಾನು, ಡಾ. ಧನಂಜಯ ಸರ್ಜಿ ಪುಷ್ಪಾರ್ಚನೆ ಮಾಡಿ ದೇವಿಗೆ ನಮಸಿದ್ದಾರೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್, ಆಯುಕ್ತರಾದ ಕವಿತಾ ಯೋಗಪ್ಪನವರ್ ಸೇರಿ ಹಲವರು ಇದ್ದರು.
ನಾಡದೇವಿ ಚಾಮುಂಡೇಶ್ವರಿ ವಿಗ್ರಹದ ಬೆಳ್ಳಿಯ ಅಂಬಾರಿ ಹೊತ್ತು ಸಾಗರ ಆನೆ ಸಾಗಿದ್ದು, ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಕುಮ್ಕಿ ಆನೆಗಳಾಗಿ ಸಾಥ್ ನೀಡಿವೆ. ಜಂಬೂಸವಾರಿ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಬೊಂಬೆ ಕುಣಿತ, ಮಂಗಳವಾದ್ಯ ಸೇರಿದಂತೆ ಹಲವು ಕಲಾತಂಡಗಳು ಮೆರುಗು ನೀಡಿವೆ. ಅನೇಕ ದೇವರುಗಳ ಮೆರವಣಿಗೆ ಕೂಡ ವಾಹನಗಳಲ್ಲಿ ಸಾಗಿ ಬಂದಿದೆ. ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ವಿಶೇಷವಾಗಿದೆ.