ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾದ ನಂತರದಲ್ಲಿ ಭಾರೀ ಏರಿಕೆ ಹಾದಿಯಲ್ಲಿ ಸಾಗುತ್ತಿದ್ದ ಕೊರೋನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ಇಳಿಮುಖವಾಗುತ್ತಿದೆ. ಪಾಸಿಟಿವಿಟಿ ದರವೂ ಕಡಿಮೆಯಾಗಿದೆ.
ಅಂತೆಯೇ, ಶಿವಮೊಗ್ಗ ಜಿಲ್ಲೆಯಲ್ಲಿರುವ ಕೊರೊನಾ ಸೋಂಕು ಭಾರೀ ಏರಿಕೆ ಕಂಡು, ಇಳಿಕೆ ಹಾದಿಯಲ್ಲಿ ಸಾಗಿ ನಂತರ ಏರುಗತಿಯಲ್ಲಿಯೇ ಮುಂದುವರೆದಿದೆ. ಬೇರೆ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಸೋಂಕು ಕಡಿಮೆಯಾಗುತ್ತಿದ್ದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಡಿಮೆಯಾಗ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಕೆಲವು ದಿನಗಳ ಹಿಂದೆಯಷ್ಟೇ ಪ್ರತಿದಿನ 10 -15 ಕ್ಕಿಂತ ಹೆಚ್ಚಿನ ಸೋಂಕಿತರು ಸಾವನ್ನಪ್ಪುತ್ತಿದ್ದರು. ಸೋಂಕಿತರು ಮತ್ತು ಸಾವಿನ ಸಂಖ್ಯೆ ಒಂದೆರಡು ದಿನ ಕಡಿಮೆಯಾಗಿ ನಂತರದಲ್ಲಿ ಬೇರೆ ಜಿಲ್ಲೆಗಳಿಗೆ ಪೈಪೋಟಿ ನೀಡುವಂತೆ ಶಿವಮೊಗ್ಗದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಹಾದಿಯಲ್ಲೇ ಸಾಗಿದೆ.
ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಗಡಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಸೋಂಕು ಇಳಿಮುಖವಾಗುತ್ತಿದ್ದರೆ ಮಧ್ಯಕರ್ನಾಟಕದ ಮಲೆನಾಡು ಭಾಗದ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಸೋಂಕು ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ. ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಬೆಂಗಳೂರು, ಮೈಸೂರು ಬಿಟ್ಟರೆ ಶಿವಮೊಗ್ಗದಲ್ಲಿ ಇಂದು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇವತ್ತು ಶಿವಮೊಗ್ಗದಲ್ಲಿ 703 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು, 10 ಸೋಂಕಿತರು ಮೃತಪಟ್ಟಿದ್ದಾರೆ. ನಿನ್ನೆ 1224 ಮಂದಿ ಸೋಂಕಿತರು ಪತ್ತೆಯಾಗಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆ ನೀಡುವ ಸಂಖ್ಯೆಗೂ ಜಿಲ್ಲಾಡಳಿತ ನೀಡುವ ಅಂಕಿಸಂಖ್ಯೆಗಳು ಭಾರಿ ಪ್ರಮಾಣದ ವ್ಯತ್ಯಾಸವಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಅದೇನೇ ಇರಲಿ, ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾದ ನಂತರದಲ್ಲಿ ಶಿವಮೊಗ್ಗದಲ್ಲಿ ಸೋಂಕು ನಿಯಂತ್ರಣಕ್ಕಾಗಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ವ್ಯವಸ್ಥೆ ಉತ್ತಮಪಡಿಸಲಾಗಿದೆ. ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಅಗತ್ಯವಾದ ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್, ಕೇರ್ ಸೆಂಟರ್ ಸೇರಿದಂತೆ ವೈದ್ಯಕೀಯ ವ್ಯವಸ್ಥೆಗಳನ್ನು ಮತ್ತಷ್ಟು ಉತ್ತಮಪಡಿಸಲಾಗಿದೆ.
ಇನ್ನು ಜನಸಂದಣಿ ಸೇರುವುದನ್ನು ನಿಯಂತ್ರಿಸಲು ವಾರಾಂತ್ಯ ಸಂಪೂರ್ಣ ಕಠಿಣ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ನಂತರ ವಾರಪೂರ್ತಿ ಕೂಡ ಕಠಿಣ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಹೀಗೆ ಕಠಿಣ ಲಾಕ್ಡೌನ್ ಜಾರಿಯಲ್ಲಿದ್ದರೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕು ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಸಿಎಂ, ಸೋಂಕು ತಡೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಡಳಿತ, ಸ್ಥಳೀಯ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಸಿಎಂ ತವರು ಜಿಲ್ಲೆ ಎಂಬ ಕಾರಣಕ್ಕೆ ಸಮರೋಪಾದಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದರೂ ಮಾತ್ರ ಸೋಂಕಿತರು ಮತ್ತು ಸಾವಿನ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎನ್ನುವುದೇ ಸೋಜಿಗದ ವಿಷಯವಾಗಿದೆ ಎನ್ನುವುದು ಚರ್ಚೆಗೆ ಕಾರಣವಾಗಿದೆ.