
ಶಿವಮೊಗ್ಗ: ನಗರದ ಹೊರವಲಯದ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಬೀಡಿ ಸೇದಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ಕೈದಿಗಳು ಗಲಾಟೆ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 21 ಕೈದಿಗಳ ವಿರುದ್ಧ ಕಾರಾಗೃಹದ ಅಧೀಕ್ಷಕರಾದ ಆರ್. ಅನಿತಾ ತುಂಗಾನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಬೀಡಿ ಕೊಡುವಂತೆ ಒತ್ತಾಯಿಸಿ ಕಾರಾಗೃಹದ ಕೈದಿಗಳು ಸೆ. 2ರಂದು ಪ್ರತಿಭಟನೆ ನಡೆಸಿದ್ದು, ಅದು ಉಗ್ರ ರೂಪಕ್ಕೆ ತಿರುಗಿದೆ ಎಂದು ಹೇಳಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರ ಸಹಚರರಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಆಗಿನಿಂದಲೂ ಜೈಲಿನಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಬೀಡಿ ಸೇದಲು ಅವಕಾಶ ನೀಡುತ್ತಿಲ್ಲ ಎಂದು ಕೈದಿಗಳು ಗಲಾಟೆ ಮಾಡಿಕೊಂಡು ಕಲ್ಲು ತೂರಿದ್ದಾರೆ ಎನ್ನಲಾಗಿದೆ.