ಶಿವಮೊಗ್ಗ: ಶಿವಮೊಗ್ಗದಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರ ಗುರುತು ಪತ್ತೆಯಾಗಿದ್ದು, ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ.
ಶಿವಮೊಗ್ಗದ ಲಯನ್ ಸಫಾರಿ ಬಳಿ ಮುತ್ತಿನಕೊಪ್ಪದಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಸಿದ್ದಣ್ಣ, ಚಂದ್ರು ಹಾಗೂ ಇಮಾಮ್ ಸಾಬ್ ಎಂದು ಗುರುತಿಸಲಾಗಿದೆ. ಮೂವರೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬೆಳವನ್ನೂರು ಮೂಲದವರು ಎಂದು ತಿಳಿದುಬಂದಿದೆ.
ಆಯನೂರಿನಿಂದ ಶಿವಮೊಗ್ಗಕ್ಕೆ ಬಂದು ಚಳ್ಳಕೆರೆಗೆ ವಾಪಾಸ್ ಆಗುತ್ತಿದ್ದರು. ಈ ವೇಳೆ ಮುತ್ತಿನಕೊಪ್ಪ ಬಳಿ ಇನ್ನೋವಾ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ.
ಅಪಘಾತದಲ್ಲಿ ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ. ಇನ್ನೋವಾ ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ವಿದೇಶಿಯರು ಇದ್ದರು. ಅಪಘಾತದಲ್ಲಿ ವಿದೇಶಿ ಪ್ರವಾಸಿಗರಿಗೆ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿದೇಶಿ ಪ್ರವಾಸಿಗರು ಜೋಗ ನೋಡಲು ಹೊರಟಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.