ಶಿವಮೊಗ್ಗದ ಕಲ್ಲುಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟದಿಂದ ಭಾರೀ ಅನಾಹುತವೇ ಸಂಭವಿಸಿದೆ. ಘನಘೋರ ಸ್ಪೋಟಕ್ಕೆ 8 ಕಾರ್ಮಿಕರು ಬಲಿಯಾಗಿದ್ದು ಲಾರಿಯಲ್ಲಿದ್ದ ಕಾರ್ಮಿಕರ ದೇಹಗಳು ಛಿದ್ರವಾಗಿದೆ. ರುಂಡ ಒಂದು ಕಡೆ, ಮುಂಡ ಒಂದು ಕಡೆ ಬಿದ್ದಿವೆ. ಕಾರ್ಮಿಕರ ಕಾಲು, ದೇಹದ ಭಾಗಗಳು ಛಿದ್ರವಾಗಿವೆ.
ಶಿವಮೊಗ್ಗ ಸಮೀಪದ ಹುಣಸೋಡು ಬಳಿ ಕಲ್ಲು ಕ್ವಾರಿಯಲ್ಲಿ ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡಿದೆ. ಬಿಹಾರ ಮೂಲದ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಲಾರಿಯಲ್ಲಿ 50 ಕ್ಕೂ ಹೆಚ್ಚು ಜಿಲೆಟಿನ್ ಬಾಕ್ಸ್ ಗಳಿದ್ದವು ಎನ್ನಲಾಗಿದೆ.
ಭೂಕಂಪವಲ್ಲ:
ರಾತ್ರಿ 10.25 ರ ಸುಮಾರಿಗೆ ಭಾರೀ ಸ್ಪೋಟ ಸಂಭವಿಸಿದ್ದು, ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗೂ ಭಾರೀ ಸ್ಪೋಟದ ಸದ್ದು ಕೇಳಿದೆ. ಆರಂಭದಲ್ಲಿ ಇದು ಭೂಕಂಪನವೆಂದು ಹೇಳಲಾಗಿತ್ತಾದರೂ, ನಂತರ ಕಲ್ಲು ಗಣಿಯಲ್ಲಿ ನಡೆದ ಸ್ಪೋಟವೆಂದು ಗೊತ್ತಾಗಿದೆ.
ಇಂದು ಇಡೀ ಭಾರತದಲ್ಲಿ ಭೂಕಂಪ ಆದ ಯಾವುದೇ ರೆಕಾರ್ಡ್ ಆಗಿಲ್ಲ ಎಂದು ಭೂಗರ್ಭ ಶಾಸ್ತ್ರಜ್ಞ ಎಚ್.ಎಸ್.ಎಂ. ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ. ಇಡೀ ವಿಶ್ವದಲ್ಲಿ ಗ್ರೀಸ್ ನಲ್ಲಿ ಭೂಕಂಪ ಆಗಿದ್ದು ಹೊರತು ಮತ್ಯಾವುದೂ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.