ಶಿವಮೊಗ್ಗ: ಯುವತಿಗೆ ಮುದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅರುಣ್ ಕುಗ್ವೆ ಬಂಧಿತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಸಾಗರದ ನಿವಾಸದಲ್ಲಿ ಅರುಣ್ ಕುಗ್ವೆಯನ್ನು ಬಂಧಿಸಿದ್ದಾರೆ.
ಸಂತ್ರಸ್ತ ಯುವತಿ ಮೊದಲು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಕಾರಣಾಂತರಗಳಿಂದ ಆರೋಪಿ ಅರುಣ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಯುವತಿ ಶಿವಮೊಗ್ಗಕ್ಕೆ ಬಂದು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಪಿಐ ಭರತ್ ಕುಮಾರ್ ನೇತೃತ್ವದ ತಂಡ ಅರುಣ್ ಕುಗ್ವೆಯನ್ನು ಬಂಧಿಸಿದೆ.
ಯುವತಿ ಮಾಡಿರುವ ಆರೋಪದ ಪ್ರಕಾರ ಅರುಣ್ ಕುಗ್ವೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷಗಳಿಂದ ಸಂಬಂಧ ಬೆಳೆಸಿ, ಶಿವಮೊಗ್ಗ, ಜೋಗ ಸೇರಿದಂತೆ ಹಲವೆಡೆ ಸುತ್ತಾಡಿದ್ದಾನೆ. ಅಲ್ಲದೇ ಬಲವಂತವಾಗಿ ದೈಹಿಕವಾಗಿಯೂ ಸಂಬಂಧ ಬೆಳೆಸಿ, ಬಲಾತ್ಕಾರದ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಮದುವೆಯಾಗುವುದಾಗಿ ಹೇಳಿ ನಂಬಿಸಿ ಈಗ ಬೇರೊಬ್ಬ ಯುವತಿ ಜೊತೆ ಇದೇ ರೀತಿ ವರ್ತಿಸುತ್ತಿದ್ದು, ಪ್ರಶ್ನಿಸಿದ್ದಕ್ಕೆ ಬೆದರಿಕೆ ಹಾಕಿದ್ದಾನೆ.
ಅಲ್ಲದೇ ಬೇರೊಂದು ಯುವತಿ ಜೊತೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದು, ನಾನು ಹಾಗೂ ಕುಟುಂಬದವರು ಇದನ್ನು ಪ್ರಶ್ನಿಸಿದ್ದಕ್ಕೆ ಅರುಣ್ ಕುಗ್ವೆ ಹಾಗೂ ಆತನ ಸಹೋದರ ಗಣೇಶ್ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅರುಣ್ ಕುಗ್ವೆ ಹಾಗೂ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 354, 376, 506 ಅಡಿ ಪ್ರಕರಣ ದಾಖಲಾಗಿದ್ದು, ಸದ್ಯ ಅರುಣ್ ಕುಗ್ವೆಯನ್ನು ಬಂಧಿಸಲಾಗಿದೆ.