ಶಿವಮೊಗ್ಗ: ಪರೇಶ್ ಮೇಸ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಬ್ಬೆ ಹಾಕಿದ್ದ ಬಿಜೆಪಿ ನಾಯಕರು ಈಗ ಸಾಮೂಹಿಕ ರಾಜೀನಾಮೆ ಕೊಡಬೇಕು ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದ್ದಾರೆ.
ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಾದ ಕೆ.ಎಸ್. ಈಶ್ವರಪ್ಪ, ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗ್ಡೆ ಮುಂತಾದವರು ಪರೇಶ್ ಮೇಸ್ತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಬ್ಬೆ ಹೊಡೆದು, ಇದು ಅನ್ಯಕೋಮಿನವರು ಮಾಡಿದ ಕೊಲೆಯಾಗಿದೆ ಎಂದು ಆರೋಪಿಸಿದ್ದಲ್ಲದೇ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಕರೆ ನೀಡಿ, ಕೋಮು ಗಲಭೆ ಸೃಷ್ಠಿಸಿ ಹಿಂಸಾಚಾರಕ್ಕೆ ಕಾರಣರಾಗಿದ್ದರು. ಕೇವಲ ಉತ್ತರ ಕನ್ನಡ ಜಿಲ್ಲೆಯಲ್ಲದೇ ಇತರ ಜಿಲ್ಲೆಗಳಲ್ಲೂ ಕೋಮು ದಳ್ಳುರಿ ಕಿಚ್ಚು ಅದರಲ್ಲೂ ಶೋಭಾ ಮೇಡಂ ಬಾಯಿಗೆ ಬಂದಂತೆ ಮಾತನಾಡಿ ಕೋಮು ಸಂಘರ್ಷಕ್ಕೆ ಕಾರಣರಾಗಿದ್ದರು. ಈಗ ಸಿಬಿಐ ತನಿಖೆ ನಡೆಸಿ ಪರೇಶ್ ಮೇಸ್ತಾ ಹತ್ಯೆ ನಡೆದಿಲ್ಲ. ಬದಲಾಗಿ ಆತನದ್ದು ಆಕಸ್ಮಿಕ ಸಾವು ಎಂದು ಉಲ್ಲೇಖಿಸಿದೆ. ಈ ಹಿನ್ನಲೆಯಲ್ಲಿ ಬಿಜೆಪಿಯವರು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಬೇಳೂರು ಆಗ್ರಹಿಸಿದರು.
ಇದೇ ರೀತಿ ಪ್ರವೀಣ್ ನೆಟ್ಟಾರು ಹಾಗೂ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಬಗ್ಗೆಯೂ ಗಲಾಟೆಗಳು ನಡೆದಿದ್ದವು. ರಾಜ್ಯ ಸರ್ಕಾರ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಆತನ ಪತ್ನಿಗೆ ಸರ್ಕಾರಿ ಕೆಲಸ ನೀಡಿದೆ. ಆದರೆ, ಹರ್ಷನ ಕುಟುಂಬಕ್ಕೆ ಕೆಲಸ ನೀಡಿಲ್ಲ. ಏಕೆಂದರೆ ದಕ್ಷಿಣ ಕನ್ನಡದಲ್ಲಿ ಪೂಜಾರಿ ಸಮುದಾಯದ ಮತಗಳು ಹೆಚ್ಚಿವೆ. ಈಶ್ವರಪ್ಪ ಅವರು ಹರ್ಷನ ಕೊಲೆ ಪ್ರಕರಣವನ್ನು ಅತಿ ದೊಡ್ಡದಾಗಿ ಬಿಂಬಿಸಿದ್ದರು. ಆತ ಕೂಡ ಹಿಂದೂ ಅಲ್ಲವೇ? ಅವರ ಕುಟುಂಬಕ್ಕೆ ಏಕೆ ಕೆಲಸ ಕೊಡಲಿಲ್ಲ? ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ರಮೇಶ್ ಶಂಕರಘಟ್ಟ, ವೈ.ಬಿ. ಚಂದ್ರಕಾಂತ್, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಪ್ರಮುಖರಾದ ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಚಂದ್ರಶೇಖರ್ ಮುಂತಾದವರಿದ್ದರು.