ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಇತ್ತೀಚೆಗಷ್ಟೇ ವಿಮಾನ ಹಾರಾಟ ಆರಂಭವಾಗಿದೆ. ಈ ಮಧ್ಯೆ ವಿಮಾನ ನಿಲ್ದಾಣದ ರನ್ ವೇ ಸ್ಪಷ್ಟವಾಗಿ ಕಾಣದ ಹಿನ್ನೆಲೆಯಲ್ಲಿ ವಿಮಾನವೊಂದು ಬೆಂಗಳೂರಿಗೆ ವಾಪಸ್ ಆದ ಘಟನೆ ನಡೆದಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಹೊರಟ ಇಂಡಿಗೋ ವಿಮಾನ ಲ್ಯಾಂಡ್ ಮಾಡಲು ರನ್ ವೇ ಸರಿಯಾಗಿ ಕಂಡಿಲ್ಲ. ಇದರಿಂದಾಗಿ ನಾಲ್ಕು ಬಾರಿ ವಿಮಾನ ಲ್ಯಾಂಡ್ ಮಾಡಲು ಪೈಲಟ್ ಯತ್ನಿಸಿದ್ದಾರೆ ಆದರೂ ಸಾಧ್ಯವಾಗದೇ ವಿಮಾವ ಬೆಂಗಳೂರಿಗೆ ವಾಪಸ್ ಆಗಿದೆ.
ಭಾನುವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆಯಾಗುತ್ತಿತ್ತು. ಹವಾಮಾನ ವೈಫರಿತ್ಯದಿಂದಾಗಿ ರನ್ ವೇ ಸರಿಯಾಗಿ ಕಾಣುತ್ತಿರಲಿಲ್ಲ. ಪೈಲಟ್ ಗೆ ರನ್ ವೇ ಸ್ಪಷ್ಟವಾಗಿ ಕಾಣದಿದ್ದರೆ ವಿಮಾನಗಳನ್ನು ಲ್ಯಾಂಡ್ ಮಾಡುವುದಿಲ್ಲ. ಭಾನುವರವೂ ಇದೇ ರೀತಿ ಆಗಿದೆ. ಬೆಂಗಳೂರಿನಿಂದ 9:50ಕ್ಕೆ ಹೊರಟ ಇಂಡಿಗೋ ವಿಮಾನ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದಿದೆ. ಆದರೆ ರನ್ ವೇ ಸ್ಪಷ್ಟವಾಗಿ ಕಾಣದ ಕಾರಣ ವಾಪಸ್ ಬೆಂಗಳೂರಿಗೆ ತೆರಳಿದ್ದು, ಮಧ್ಯಾಹ್ನ 11:51ಕ್ಕೆ ಬೆಂಗಳೂರು ಏರ್ ಪೋರ್ಟ್ ನಲ್ಲಿಯೇ ಮತ್ತೆ ಲ್ಯಾಂಡ್ ಆಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಆರಂಭವಾದ ಬಳಿಕ ಇದೇ ಮೊದಲ ಭಾರಿ ಈ ಘಟನೆ ನಡೆದಿದ್ದು, ಪ್ರತಿಕೂಲ ಹವಾಮಾನದಿಂದ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗದೇ ಡೈವರ್ಟ್ ಆಗಿದೆ.