ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಏರ್ ಪೋರ್ಟ್ ನಿಂದ ವಿಮಾನಗಳ ಹಾರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 31ರಿಂದ ಲೋಹದ ಹಕ್ಕಿಗಳ ಹಾರಾಟ ಆರಂಭವಾಗಲಿದೆ.
ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಆಗಸ್ಟ್ 31ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಧಿಕೃತವಾಗಿ ವಿಮಾನ ಹಾರಾಟ ಆರಂಭವಾಗಲಿದೆ. ಅಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 11:5ಕ್ಕೆ ಲ್ಯಾಂಡ್ ಆಗಲಿದೆ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ವಿಮಾನ ನಿಲ್ದಾಣ ಅಧಿಕೃತವಾಗಿ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸಚಿವರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಆರಂಭದಲ್ಲಿ ಶಿವಮೊಗ್ಗ ಹಾಗೂ ಬೆಂಗಳೂರು ನಡುವೆ ವಿಮಾನ ಹಾರಾಟ ಆರಂಭವಾಗಲಿದ್ದು, ಒಂದು ತಿಂಗಳಲ್ಲಿ ಹೈದರಾಬಾದ್ ಹಾಗೂ ತಿರುಪತಿಗೆ ವಿಮಾನ ಸೇವೆ ಆರಂಭವಾಗಲಿದೆ. ಇನ್ನು ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇದ್ದು ಡಿಸೆಂಬರ್ ವೇಳೆಗೆ ಸಾರ್ವಜನಿಕ ಸೇವೆ ಸಿಗಲಿದೆ. ಅಲ್ಲದೇ ಕಾರ್ಗೋ ಏರ್ ಲೈನ್ಸ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಇದರಿಂದ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಭಾಗದ ಅಡಿಕೆ, ಕಾಫಿ ಬೆಳೆಗಾರರಿಗೆ ತಮ್ಮ ಬೆಳೆಗಳನ್ನು ದೇಶ ವಿದೇಶಗಳಿಗೆ ರಫ್ತು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.