ಶಿವಮೊಗ್ಗ: ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ HMPV ವೈರಸ್ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ 6 ಮಕ್ಕಳಲ್ಲಿ ಪತ್ತೆಯಾಗಿತ್ತು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಮೂವರು ಮಕ್ಕಳಲ್ಲಿ HMPV ವೈರಸ್ ದೃಢವಾಗಿದ್ದು, ಐವರಲ್ಲಿ ಇಬ್ಬರು ಮಕ್ಕಳು ಗುಣಮುಖರಾಗಿ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಓರ್ವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸೋಂಕಿತ ಮಗು ಕೂಡ ಸಂಪೂರ್ಣ ಗುಣಮುಖವಾಗಿದ್ದು, ಇಂದು ಅಥವಾ ನಾಳೆ ಡಿಸ್ಚಾರ್ಜ್ ಆಗಿಲಿದೆ ಎಂದು ತಿಳಿದುಬಂದಿದೆ.
ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ 6 ಮಕ್ಕಳಲ್ಲಿ HMPV ವೈರಸ್ ಕಾಣಿಸಿಕೊಂಡಿತ್ತು. ಆದರೆ ಎಲ್ಲಾ ಮಕ್ಕಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದಲ್ಲಿ ನವೆಂಬರ್ ತಿಂಗಳಿನಲ್ಲಿಯೇ 6 ಮಕ್ಕಳಲ್ಲಿ HMPV ವೈರಸ್ ಸೋಂಕು ಕಂಡುಬಂದಿತ್ತು. 1 ವರ್ಷ, 2 ವರ್ಷದ ಮಕ್ಕಳಲ್ಲಿ ಈ ಸೋಂಕು ಪತ್ತೆಯಾಗಿತ್ತು. ಎಲ್ಲಾ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. HMPV ವೈರಸ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.