ಶಿವಮೊಗ್ಗ: ಚಿನ್ನಾಭರಣ ಖರೀದಿಸಲೆಂದು ಪ್ರತಿಷ್ಠಿತ ಮಳಿಗೆಗೆ ಬಂದ ಮೂವರು ಮಹಿಳೆಯರು, ಮೂರು ಚಿನ್ನದ ಲಾಕೆಟ್ ಎಗರಿಸಿ ಪರಾರಿಯಾಗಿರುವ ಘಟನೆ ಶಿವಮೊಗ್ಗದ ಬಿ.ಹೆಚ್ ರಸ್ತೆಯಯ ಚಿನ್ನಾಭರಣ ಮಳಿಗೆಯಲ್ಲಿ ನಡೆದಿದೆ.
ಅಕ್ಷಯ ತೃತೀಯ ದಿನದಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶೂ ರೂಂ ನ ಸ್ಟಾಕ್ ತಪಾಸಣೆ ನಡೆಸುತ್ತಿದ್ದ ವೇಳೆ ಮೂರು ಚಿನ್ನದ ಲಾಕೆಟ್ ಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮೇ 10 ಅಕ್ಷಯ ತೃತೀಯ ದಿನದಂದು ನಡೆದ ಕಳ್ಳಿಯರ ಕೈಚಳಕ ಬಯಲಾಗಿದೆ.
ಅಂದು ಭೀಮಾ ಗೋಲ್ಡ್ ಆಭರಣ ಮಳಿಗೆಗೆ ಚಿನ್ನ ಖರೀದಿಗಾಗಿ ಹಲವರು ಬಂದಿದ್ದರು. ಈ ವೇಳೆ ಇಬ್ಬರು ಮಹಿಳೆಯರು, ಓರ್ವ ಯುವತಿ ಚಿನ್ನ ಖರೀದಿಗೆಂದು ಮೂರು ಲಾಕೆಟ್ ಕದ್ದು ಎಸ್ಕೇಪ್ ಆಗಿದ್ದಾರೆ.
27,600 ರೂ ಮೌಲ್ಯದ ಚಿನ್ನದ 3 ಲಾಕೆಟ್ ಗಳನ್ನು ಮಹಿಳೆಯರು ಕದ್ದಿದ್ದಾರೆ. ಮೊದಲು ಲಾಕೆಟ್ ತೋರಿಸುವಂತೆ ಇಬ್ಬರು ಮಹಿಳೆಯರು ಶೋರೂಂನ ಸೇಲ್ಸ್ ಮ್ಯಾನ್ ಗೆ ಹೇಳಿದ್ದಾರೆ. ಸೇಲ್ಸ್ ಮ್ಯಾನ್ ಲಾಕೆಟ್ ನೀಡಿದ್ದಾನೆ, ನಂತರ 25 ವರ್ಷದ ಯುವತಿ ಕೈಗೆ ಮಹಿಳೆಯರು ಲಾಕೆಟ್ ಕೊಟ್ಟು ಪಾಸ್ ಮಾಡಿರುವ ದೃಶ್ಯ ಸಹ ಸೆರೆಯಾಗಿದೆ. ಚಿನ್ನ ಖರೀದಿ ಮಾಡದೇ ಲಾಕೆಟ್ ನೊಂದಿಗೆ ಮಹಿಳೆಯರು ನಾಪತ್ತೆಯಾಗಿದ್ದಾರೆ.
ಪ್ರಕರಣದ ಬಗ್ಗೆ ಭೀಮಾ ಗೋಲ್ಡ್ ಮ್ಯಾನೇಜರ್, ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಹಿಳೆಯರನ್ನು ಪತ್ತೆ ಮಾಡಿ, ಕದ್ದ ಚಿನ್ನವನ್ನು ಹಿಂತಿರುಗಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.