
ಮಂಗಳೂರು: ಬಿಜೆಪಿಯ ಕೆಲವು ನಾಯಕರು ರಾಗಿ ಕಳ್ಳ ಎಂದು ಆರೋಪಿಸಿದ್ದು, ಅದನ್ನು ಸಾಬೀತುಪಡಿಸಬೇಕೆಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ.
ತಾವು ರಾಗಿ ಕಳ್ಳತನ ಮಾಡಿಲ್ಲ ಎಂದು ಸಾಬೀತುಪಡಿಸಲು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿದ ನಂತರ ಮಂಜುನಾಥ ಸ್ವಾಮಿ ದರ್ಶನ ಪಡೆದ ಶಿವಲಿಂಗೇಗೌಡ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಮುಖಂಡರು ನಾನು ರಾಗಿ ಕಳ್ಳ ಎಂದು ಹೇಳಿದ್ದರು. ನಾನು ಏನನ್ನು ಕದ್ದಿಲ್ಲ. ಈ ಬಗ್ಗೆ ಆಣೆ ಪ್ರಮಾಣ ಮಾಡಿದ್ದೇನೆ. ರೈತರಿಗಾಗಿ ರಾಗಿ ಒದಗಿಸಲು ನಾನು ಹೋರಾಟ ನಡೆಸಿದ್ದೇನೆ. ಬಿಜೆಪಿ ಮುಖಂಡರು ಆರೋಪಿಸಿದಂತೆ ರಾಗಿ ಕಳ್ಳತನ ಮಾಡಿಲ್ಲ. ಆರೋಪ ಮಾಡಿದವರು ಧರ್ಮಸ್ಥಳಕ್ಕೆ ಬರಲಿ ಎಂದು ಆಹ್ವಾನಿಸಿದ್ದೆ. ಆದರೆ, ಅವರು ಬಂದಿಲ್ಲ. ಅವರ ಬಳಿ ಏನು ದಾಖಲೆ ಇದೆಯೋ ಅದನ್ನು ಬಿಡುಗಡೆ ಮಾಡಲಿ. ನನ್ನಂತಹ ನಿರಪರಾಧಿಗಳನ್ನು ಸಾರ್ವಜನಿಕವಾಗಿ ನಿಂದಿಸಬಾರದು ಎಂದು ಹೇಳಿದ್ದಾರೆ.
ಕಳೆದ ಐದಾರು ತಿಂಗಳಿನಿಂದ ಜೆಡಿಎಸ್ ಜೊತೆಗೆ ಅಂತರ ಕಾಯ್ದುಕೊಂಡಿರುವುದಾಗಿ ಹೇಳಿದ ಶಿವಲಿಂಗೇಗೌಡ, ಬೆಂಬಲಿಗರೊಂದಿಗೆ ಚರ್ಚಿಸಿ ಆಣೆ ಮಾಡಲು ಬಂದಿದ್ದೆ. ರಾಜ್ಯಸಭೆ ಸದಸ್ಯರಾದ ವೀರೇಂದ್ರ ಹೆಗಡೆಯವರನ್ನು ಭೇಟಿಯಾಗಿ ಅಭಿನಂದಿಸಿದ್ದೇನೆ ಎಂದರು.