ನವದೆಹಲಿ: ಲೋಕಸಭೆಯಲ್ಲಿ ಹಿಜಾಬ್ ವಿಚಾರ ಮತ್ತೆ ಪ್ರತಿಧ್ವನಿಸಿದ್ದು, ವಿವಾದದ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ನಾಯಕ ಅಧೀರ ರಂಜನ್ ಚೌಧರಿ ಆಗ್ರಹಿಸಿದ್ದಾರೆ.
ಹಿಜಾಬ್ ಧರಿಸುವುದು ಪಾಪ ಕೃತ್ಯವಲ್ಲ. ಹಿಜಾಬ್ ವಿಚಾರದ ಬಗ್ಗೆ ಕಾಲೇಜ್ ಗಳಲ್ಲಿ ವಿವಾದ ಉಂಟಾಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಬಿಜೆಪಿ ಸದಸ್ಯ ಶಿವಕುಮಾರ್ ಉದಾಸಿ ಹೇಳಿದ್ದಾರೆ. ಇದು ರಾಜ್ಯ ಪಟ್ಟಿ ವಿಷಯವಾಗಿದೆ. ಹಿಜಾಭ್ ವಿವಾದದ ಬಗ್ಗೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್, ಬಿಜೆಪಿ ಸಂಸದರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ನಿನ್ನೆ ಕೇರಳ ಕಾಂಗ್ರೆಸ್ ಸಂಸದ ಟಿ.ಎನ್. ಪ್ರತಾಪನ್ ಅವರು, ನಾವು ನಮ್ಮ ಭಾರತವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ? ನಮ್ಮ ವೈವಿಧ್ಯತೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಎಂದು ಆಗ್ರಹಿಸಿದ್ದರು.