ಮುಂಬೈ: ಎನ್‌ಸಿಪಿ ನಾಯಕರ ಗುಂಪಿನೊಂದಿಗೆ ಅಜಿತ್ ಪವಾರ್ ಬಿಜೆಪಿಗೆ ಸೇರ್ಪಡೆಗೊಂಡರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮಹಾರಾಷ್ಟ್ರದಲ್ಲಿ ಸರ್ಕಾರದ ಭಾಗವಾಗುವುದಿಲ್ಲ ಎಂದು ಪಕ್ಷದ ವಕ್ತಾರ ಸಂಜಯ್ ಶಿರ್ಸಾತ್ ಖಡಕ್ ಆಗಿ ಹೇಳಿದ್ದಾರೆ.
‘ನಾವು ಕಾಂಗ್ರೆಸ್-ಎನ್‌ಸಿಪಿ (ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರದ ಭಾಗವಾಗಿದ್ದವು) ಅವರೊಂದಿಗೆ ಇರಲು ಬಯಸದ ಕಾರಣ ಆ ಸರ್ಕಾರವನನ್ನು ನಾವು ತೊರೆದಿದ್ದೇವೆ. ಅಜಿತ್ ಪವಾರ್ ಅವರಿಗೆ ಅಲ್ಲಿ ಮುಕ್ತ ಹಸ್ತವಿಲ್ಲ. ಆದ್ದರಿಂದ, ಅವರು ಎನ್‌ಸಿಪಿ ತೊರೆದರೆ, ನಾವು ಅವರನ್ನು ಸ್ವಾಗತಿಸುತ್ತೇವೆ. ಒಂದು ವೇಳೆ, ಅವರು ಎನ್‌ಸಿಪಿ (ನಾಯಕರು) ಗುಂಪಿನೊಂದಿಗೆ ಬಂದರೆ ನಾವು ಸರ್ಕಾರದಲ್ಲಿ ಇರುವುದಿಲ್ಲ’ ಎಂದು ಶಿವಸೇನಾ ನಾಯಕ ಹೇಳಿದ್ದಾರೆ.
ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿರ್ಸಾತ್, ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ನಾವು ಅಧಿಕಾರವನ್ನು ಹಂಚಿಕೊಂಡಿದ್ದೇವೆ. ನಮ್ಮ ವಿರೋಧಿಯಾಗಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ನೇರವಾಗಿ ಬಿಜೆಪಿಯೊಂದಿಗೆ ಹೋಗುವುದಿಲ್ಲ ಎಂದು ಭಾವಿಸುವುದಾಗಿ ತಿಳಿಸಿದ್ದಾರೆ.