ಮದುವೆ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ತಮ್ಮ ಪಕ್ಷ ಬೇಧವನ್ನು ಬಿಟ್ಟು ಭಾಗಿಯಾಗ್ತಾರೆ. ಇಲ್ಲಿ ಯಾವುದೇ ರಾಜಕೀಯ ವೈಷಮ್ಯವನ್ನು ತೋರದೇ ಖುಷಿಯಿಂದ ಆ ಕ್ಷಣವನ್ನು ಕಳೆಯುತ್ತಾರೆ.
ಇಂತದ್ದೇ ಒಂದು ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಘಟನೆಯು ಕಳೆದ ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿ ನಡೆದಿದೆ.
ಶಿವಸೇನಾ ಸಂಸದ ಸಂಜಯ್ ರಾವತ್ ಎನ್ಸಿಪಿ ಸಂಸದೆ ಸುಪ್ರಿಯಾ ಸುಲೆ ಕಾರ್ಯಕ್ರಮವೊಂದರಲ್ಲಿ ಒಟ್ಟಾಗಿ ನೃತ್ಯ ಮಾಡುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಂಜಯ್ ರಾವತ್ ಅವರ ಪುತ್ರಿಯ ಮದುವೆ ಸಂಗೀತ್ ಕಾರ್ಯಕ್ರಮದಲ್ಲಿ ಇಬ್ಬರು ಸಂಸದರು ಲ್ಯಾಂಬೊರ್ಗಿನಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಂಜಯ್ ರಾವತ್ ಪುತ್ರಿ ಪೂರ್ವಷಿ ರಾವತ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಕಾರ್ಯಕ್ರಮಕ್ಕೆ ಸಾಕಷ್ಟು ರಾಜಕಾರಣಗಳು ಆಗಮಿಸಿದ್ದರು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಮನಸಾರೆ ನಕ್ಕಿದ್ದಾರೆ. ಸುಪ್ರಿಯಾ ಸುಲೆ ವಿನಂತಿ ಮಾಡಿದ ಬಳಿಕ ಸಂಜಯ್ ರಾವತ್ ಅವರೊಂದಿಗೆ ಹೆಜ್ಜೆ ಹಾಕಿದರು ಎನ್ನಲಾಗಿದೆ.
ಸಂಜಯ್ ರಾವತ್ ಶಿವಸೇನಾ ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಇವರು ರಾಜ್ಯಸಭೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ. ಸುಪ್ರಿಯಾ ಸುಲೆ ಎನ್ಸಿಪಿ ಪಕ್ಷದ ನಾಯಕಿ ಹಾಗೂ ಎನ್ಸಿಪಿ ಅಧ್ಯಕ್ಷ, ಮಹಾರಾಷ್ಟ್ರದ ಮಾಜಿ ಸಿಎಂ ಶರದ್ ಪವಾರ್ ಪುತ್ರಿ. ಸುಪ್ರಿಯಾ ಸುಲೆ ಬಾರಾಮತಿ ಕ್ಷೇತ್ರದ ಸಂಸದರಾಗಿದ್ದಾರೆ.