ನವದೆಹಲಿ: ಲೋಕಸಭೆಯಲ್ಲಿ ಶಿವಸೇನೆ ಗಡಿ ವಿಚಾರದ ಬಗ್ಗೆ ಕ್ಯಾತೆ ತೆಗೆದಿದೆ. ಬೆಳಗಾವಿಯಲ್ಲಿ ಮರಾಠಿಗರ ರಕ್ಷಣೆಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದು, ಇದಕ್ಕೆ ರಾಜ್ಯದ ಸಂಸದರು ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮರಾಠಿಗರಿಗೆ ರಕ್ಷಣೆಯಿಲ್ಲ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕಿದೆ ಎಂದು ಶಿವಸೇನೆ ಸಂಸದ ಅರವಿಂದ್ ಸಾವಂತ್ ಹೇಳಿದ್ದು, ರಾಜ್ಯದ ಸಂಸದರಾದ ಶಿವಕುಮಾರ ಉದಾಸಿ, ಪ್ರತಾಪ್ ಸಿಂಹ, ಸಂಗಣ್ಣ ಕರಡಿ, ದೇವೇಂದ್ರಪ್ಪ ಕೆರಳಿದ್ದು, ಅವರ ಬಾಯಿ ಮುಚ್ಚಿಸಿದ್ದಾರೆ.
ಈ ವಿಚಾರದ ಬಗ್ಗೆ ಶಿವಸೇನೆ ಮತ್ತು ರಾಜ್ಯದ ಸಂಸದರ ನಡುವೆ ವಾಗ್ವಾದ ನಡೆದಿದೆ. ಸಂಸದ ಶಿವಕುಮಾರ್ ಉದಾಸಿ, ಬೆಳಗಾವಿ ಗಡಿ ವಿಚಾರದಲ್ಲಿ ಮಹಾಜನ್ ವರದಿ ಅಂತಿಮವಾಗಿದೆ. ಈ ವಿಚಾರದಲ್ಲಿ ಮತ್ತೆ ಪ್ರಸ್ತಾಪಿಸುವ ಅಗತ್ಯವಿಲ್ಲ. ಜನರ ಗಮನ ಸೆಳೆಯಲು ಶಿವಸೇನೆ ಹೀಗೆ ಮಾಡುತ್ತಿದೆ ಎಂದು ದೂರಿದ್ದಾರೆ.