ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವ ಮಧ್ಯೆ ಸರ್ಕಾರ ಉಳಿಸಿಕೊಳ್ಳಲು ಉದ್ಧವ್ ಠಾಕ್ರೆ ಮತ್ತಿತರರು ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಅದರಲ್ಲೂ ಸಂಸದ ಸಂಜಯ್ ರಾವತ್ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ.
ಇದರ ಮಧ್ಯೆ ಸಂಜಯ್ ರಾವತ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದು, ಕೇಂದ್ರ ಸಚಿವರೊಬ್ಬರು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉಳಿಸಿಕೊಳ್ಳಲು ಶರದ್ ಪವಾರ್ ಯತ್ನಿಸಿದರೆ ಅವರನ್ನು ಮನೆಗೆ ಹೋಗಲು ಬಿಡುವುದಿಲ್ಲ ಎಂದಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸುಮ್ಮನಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಬಂಡಾಯದ ನೇತೃತ್ವ ವಹಿಸಿರುವ ಏಕನಾಥ್ ಶಿಂಧೆ ಸೇರಿದಂತೆ 12 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಹೇಳಿರುವ ಸಂಜಯ್ ರಾವತ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಯಾವುದೇ ಕಾರಣಕ್ಕೂ ಪತನಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.