ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪರವಾಗಿ ಎಷ್ಟು ಶಾಸಕರಿದ್ದಾರೆ ಎಂಬುದು ಈಗ ನಿಕ್ಕಿಯಾಗಿದೆ. ಭಾನುವಾರ ನಡೆದ ವಿಧಾನಸಭೆ ಸ್ಪೀಕರ್ ಆಯ್ಕೆಯ ವೇಳೆ, ಶಿವಸೇನೆಯ 16 ಶಾಸಕರು ಉದ್ಧವ್ ಠಾಕ್ರೆ ಬೆನ್ನಿಗೆ ನಿಂತಿದ್ದಾರೆ.
ಭಾನುವಾರ ನಡೆದ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿಯ ರಾಹುಲ್ ನಾರ್ವೇಕರ್ ಪರವಾಗಿ 164 ಶಾಸಕರು ಮತ ಚಲಾಯಿಸಿದ್ದರೆ, ಠಾಕ್ರೆ ನೇತೃತ್ವದ ಶಿವಸೇನೆ ಅಭ್ಯರ್ಥಿ ರಾಜನ್ ಸಾಲ್ವಿ ಅವರಿಗೆ 107 ಮಂದಿ ಮತ ಚಲಾಯಿಸಿದ್ದರು. ಈ ಮೂಲಕ ಬಿಜೆಪಿ ಮತ್ತು ಏಕನಾಥ್ ಶಿಂಧೆ ಬಣದ ಶಿವಸೇನೆ ಅಭ್ಯರ್ಥಿಯಾಗಿದ್ದ ರಾಹುಲ್ ನಾರ್ವೇಕರ್ ಜಯಗಳಿಸಿದ್ದರು.
288 ಶಾಸಕರ ಸಂಖ್ಯಾಬಲದ ವಿಧಾನಸಭೆಯಲ್ಲಿ ಪ್ರಸ್ತುತ 287 ಶಾಸಕರಿದ್ದಾರೆ. ಈ ಪೈಕಿ ಸ್ಪೀಕರ್ ಚುನಾವಣೆಯಲ್ಲಿ 271 ಮಂದಿ ಶಾಸಕರು ತಮ್ಮ ಮತ ಚಲಾಯಿಸಿದ್ದರೆ, ಇಬ್ಬರು ಎಸ್ ಪಿ ಮತ್ತು ಒಬ್ಬರು ಎಐಎಂಐಎಂನ ಶಾಸಕರು ಮತದಾನದಿಂದ ದೂರ ಉಳಿದಿದ್ದರು. ಒಟ್ಟು 12 ಮಂದಿ ಗೈರು ಹಾಜರಿದ್ದರು. ಇವರಲ್ಲಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಬಿಜೆಪಿಯ ಲಕ್ಷ್ಮಣ್ ಜಗ್ತಪ್ ಮತ್ತು ಮುಕ್ತಾ ತಿಲಕ್ ಅವರು ಸೇರಿದ್ದಾರೆ.
ಇನ್ನು ವಿವಿಧ ಆರ್ಥಿಕ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಎನ್ ಸಿ ಪಿ ಇಬ್ಬರು ಶಾಸಕರಾದ ಅನಿಲ್ ದೇಶ್ ಮುಖ್ ಮತ್ತು ನವಾಬ್ ಮಲಿಕ್ ಜೈಲಿನಲ್ಲಿದ್ದಾರೆ.