ಮುಂಬೈ: ಮಹಾರಾಷ್ಟ್ರ ಸಿಎಂ ಅಧಿಕೃತ ನಿವಾಸವನ್ನು ಉದ್ಧವ್ ಠಾಕ್ರೆ ತೊರೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿಯವರ ಅಧಿಕೃತ ಬಂಗಲೆ ವರ್ಷಾ ನಿವಾಸವನ್ನು ಠಾಕ್ರೆ ತೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನನ್ನ ಶಿವಸೈನಿಕರು ನಾನು ಸಿಎಂ ಆಗಿ ಮುಂದುವರಿಯಲು ಬಯಸದೇ ರಾಜೀನಾಮೆ ನೀಡಿ ಎಂದರೆ, ‘ವರ್ಷ’ ಬಿಟ್ಟು ನನ್ನ ‘ಮಾತೋಶ್ರೀ’ಗೆ ಹೋಗಲು ಸಿದ್ಧ. ನಾನು ಶಿವಸೇನಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಕೂಡ ಸಿದ್ಧ. ಬೇರೆ ಶಿವಸೈನಿಕರು ಮುಖ್ಯಮಂತ್ರಿಯಾದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.
ನಿಮ್ಮ ಕಾರ್ಯವೈಖರಿ ಸರಿಯಿಲ್ಲವೆಂದು ಶಿವಸೇನೆ ಶಾಸಕರು ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ. ರಾಜೀನಾಮೆ ಪತ್ರ ಬರೆದಿಟ್ಟಿದ್ದೇನೆ. ನೀವೆಲ್ಲರೂ ಇಲ್ಲಿಗೆ ಬನ್ನಿ. ನಾವೆಲ್ಲರೂ ಒಟ್ಟಿಗೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ನೀಡೋಣ. ನೀವೆಲ್ಲೋ ಕುಳಿತುಕೊಂಡು ಉದ್ಧವ್ ಠಾಕ್ರೆ ಸರಿ ಇಲ್ಲವೆಂದರೆ ಒಪ್ಪುವುದಿಲ್ಲ. ನನ್ನ ಮುಂದೆ ಕುಳಿತು ನೀವು ಸರಿ ಇಲ್ಲವೆಂದರೆ ತಕ್ಷಣವೇ ರಾಜೀನಾಮೆ ಕೊಡುತ್ತೇನೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಮೈತ್ರಿ ಪಕ್ಷದ ನಾಯಕರು ಮತ್ತು ಶಿವಸೇನೆ ಹಿರಿಯ ನಾಯಕರೊಂದಿಗೆ ಚರ್ಚಿಸಿ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಆದರೆ, ಇದಕ್ಕೆ ಸಹಮತ ವ್ಯಕ್ತವಾಗದ ಕಾರಣ ರಾಜೀನಾಮೆ ಅಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗಿದೆ.