ಮಹಾರಾಷ್ಟ್ರದಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದಿದ್ದು, ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆಗೆ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ.
ಈ ಮೂಲಕ ಶಿವಸೇನೆ ಪಕ್ಷವನ್ನು ವಿಭಜಿಸಲಾಯಿತು ಎಂಬ ಆರೋಪದಿಂದ ಬಿಜೆಪಿ ಮುಕ್ತಿ ಪಡೆದುಕೊಂಡಿದೆ. ಉದ್ಧವ್ ಠಾಕ್ರೆ ತಮಗಾದ ದ್ರೋಹದ ರಾಜಕೀಯ ಲಾಭ ಪಡೆಯದಂತೆಯೂ ಬಿಜೆಪಿ ತಂತ್ರ ರೂಪಿಸಿದೆ. ಉದ್ಧವ್ ಠಾಕ್ರೆಯನ್ನು ಕಟ್ಟಿಹಾಕಲು ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಪಟ್ಟ ಕಟ್ಟಿ ಬಿಜೆಪಿ ಚಾಣಾಕ್ಷ ನಡೆ ಅನುಸರಿಸಿದೆ.
ಅಲ್ಲದೇ, ರಾಜಕೀಯ ಲಾಭಕ್ಕಾಗಿ ಬಾಳಾ ಠಾಕ್ರೆಯವರ ಶಿವಸೇನೆ ಪಕ್ಷವನ್ನು ಬಳಸಿಕೊಂಡಿಲ್ಲ ಎನ್ನುವ ಸಂದೇಶ ರವಾನಿಸಿದೆ. ಬದಲಾಗಿ ಶಿವಸೈನಿಕರಿಗೆ ಸಿಎಂ ಸ್ಥಾನ ನೀಡಿದ್ದೇವೆ ಎನ್ನುವ ಸಂದೇಶವನ್ನೂ ರವಾನಿಸಿದೆ.
ಏಕನಾಥ ಶಿಂಧೆ ಬಣದವರು ಛಿದ್ರವಾಗದಂತೆ ನೋಡಿಕೊಳ್ಳುವ ರಾಜಕೀಯ ಲೆಕ್ಕಾಚಾರವೂ ಇದರ ಹಿಂದಿದೆ. ಅಲ್ಲದೇ, ಮರಾಠ ಸಮುದಾಯದ ಶಿಂಧೆಗೆ ಮಣೆ ಹಾಕುವ ಮೂಲಕ ಮರಾಠರ ಸ್ಟ್ರಾಂಗ್ ಮ್ಯಾನ್ ಶರದ್ ಪವಾರ್ ಗೆ ಬಿಜೆಪಿ ಕೌಂಟರ್ ನೀಡಿದೆ. ಇದೇ ವೇಳೆ ಬಲಿಷ್ಠ ಮರಾಠ ಸಮುದಾಯವನ್ನು ಬಿಜೆಪಿಗೆ ಸೆಳೆಯಲು ಬಿಜೆಪಿ ಪ್ರಯತ್ನ ನಡೆಸಿದೆ. ಮರಾಠ ಮೀಸಲಾತಿ ಹೋರಾಟಕ್ಕೂ ಸಂದೇಶ ನೀಡಿದೆ.
ಇದಕ್ಕಿಂತ ಮುಖ್ಯವಾಗಿ ಬಿಜೆಪಿಗೆ ಅಧಿಕಾರವೇ ಮುಖ್ಯವಲ್ಲ, ಮಿತ್ರ ಪಕ್ಷಗಳಿಗೂ ಸ್ಥಾನಮಾನವಿದೆ ಎಂದು ರಾಷ್ಟ್ರಮಟ್ಟದಲ್ಲಿ ಮಿತ್ರ ಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಮುಖ್ಯಮಂತ್ರಿ ಸ್ಥಾನ ತ್ಯಾಗದಿಂದ ಮಹಾರಾಷ್ಟ್ರದಲ್ಲಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಈ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿಯದ್ದಾಗಿದೆ ಎಂದು ಹೇಳಲಾಗಿದೆ.