ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿರುವ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 7 ಜನರ ಶವ ಪತ್ತೆಯಾಗಿದೆ. ಗುಡ್ಡ ಕುಸಿತ ಘಟನೆಯಲ್ಲಿ ಕಣ್ಮರೆಯಾದವರ ಸಂಖ್ಯೆ ಎಷ್ಟು ಎಂಬುದೇ ಮಾಹಿತಿ ಸಿಗುತ್ತಿಲ್ಲ. ಆದರೆ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಜುಲೈ 16ರಂದು ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಆರಂಭದಲ್ಲಿ 7 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಇದೀಗ 7 ಜನರ ಮೃತದೇಹ ಅಂಕೋಲಾ ತಾಲೂಕಿನ ಮಂಜಗುಣಿ ಬಳಿಯ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಗುಡ್ಡ ಕುಸಿತದ ವೇಳೆ ಮಣ್ಣಿನಡಿ ಇನ್ನಷ್ಟು ಜನ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮಣ್ಣು ತೆರವು ಕಾರ್ಯ ಮೂರು ದಿನಗಳಿಂದ ಮುಂದುವರೆದಿದೆ.
ಇನ್ನು ಗುಡ್ಡ ಕುಸಿತದ ರಭಸಕ್ಕೆ ಎರಡು ಗ್ಯಾಸ್ ಟ್ಯಾಂಕರ್ ಗಳು, ಎರಡು ಕಾರುಗಳು ಗಂಗಾವಳಿ ನದಿಗೆ ಬಿದ್ದಿದ್ದು, ನೀರಿನಲ್ಲಿ ಕೊಚ್ಚಿ ಹೋಗಿವೆ. ಈಗಾಗಲೇ ಸಿಕ್ಕಿರುವ 7 ಶವಗಳು ಕೂಡ ಗಂಗಾವಳಿ ನದಿಯಲ್ಲಿ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಗುಡ್ಡ ಕುಸಿತದಲ್ಲಿ ಸಾವಿನ ಸಂಖ್ಯೆ ಇನ್ನಷ್ಟುವ ಹೆಚ್ಚುವ ಸಾಧ್ಯತೆ ಇದೆ.