ಕಾರವಾರ: ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಸ್ ಟ್ಯಾಂಕರ್ ಚಾಲಕನ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಈವರೆಗೆ 7 ಜನರ ಮೃತದೇಹ ಪತ್ತೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿ ಬಳಿ ಗಂಗಾವಳಿ ನದಿಯಲ್ಲಿ ಗ್ಯಾಸ್ ಟ್ಯಾಂಕರ್ ಚಾಲಕನ ಶವ ಪತ್ತೆಯಾಗಿದೆ. ಮೃತ ಚಾಲಕನನ್ನು ತಮಿಳುನಾಡು ಮೂಲದ ಮುರುಗನ್ (45) ಎಂದು ಗುರುತಿಸಲಾಗಿದೆ.
ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದಲ್ಲಿ ಇಂದು ಮುಂಜಾನೆ ಬಾಲಕಿಯ ಶವ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ತಮಿಳುನಾಡು ಮೂಲದ ಚಾಲಕ ಚಿನ್ನ ಎಂಬಾತನ ಶವ ಪತ್ತೆಯಾಗಿತ್ತು. ಈವರೆಗೆ ಒಟ್ಟು 7 ಜನರ ಶವ ಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಸಂಭವಿಸಿದ್ದು, 9 ಜನರು ಜನರು ಕಣ್ಮರೆಯಾಗಿದ್ದರು. ಅವರಲ್ಲಿ ಈವರೆಗೆ 7 ಜನರು ಸಾವನ್ನಪ್ಪಿದ್ದು, 7 ಜನರ ಶವಗಳು ಪತ್ತೆಯಾಗಿವೆ. ಮೂರು ದಿನಗಳಿಂದ ಮಣ್ಣು ತೆರವು ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.
ಇನ್ನು ಗುಡ್ಡ ಕುಸಿತದ ರಭಸಕ್ಕೆ ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದ್ದು, ಇನ್ನಷ್ಟು ಆತಂಕ ಸೃಷ್ಟಿಸಿದೆ.