ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರ ಸಂಖ್ಯೆ ಏರುತ್ತಲೇ ಇದೆ. ದುರಂತದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ನಿಜಕ್ಕೂ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಸಿಗುತ್ತಿಲ್ಲ. ಈ ನಡುವೆ ದಿನದಿಂದ ದಿನಕ್ಕೆ ನಾಪತ್ತೆಯಾದವರ ಸಂಖ್ಯೆ ಹೆಚ್ಚುತ್ತಿದ್ದು, ಗುಡ್ಡ ಕುಸಿತದ ವೇಳೆ ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಗೋಕರ್ಣ ಬಳಿಯ ಗಂಗೆಕೊಳ್ಳದ ಯುವಕ ಲೋಕೇಶ್ ನಾಪತ್ತೆಯಾಗಿದ್ದು, ಮಗನನ್ನು ಹುಡುಕಿಕೊಡಿ ಎಂದು ಲೋಕೇಶ್ ತಾಯಿ ಮಾಹಾದೇವಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳೆದ ಐದು ದಿನಗಳಿಂದ ಲೋಕೇಶ್ ಮನೆಗೆ ಬಂದಿಲ್ಲ. ಗುಡ್ಡ ಕುಸಿತದ ದಿನ ಅಲ್ಲಿನ ಹೋಟೆಲ್ ನಲ್ಲಿ ಲೋಕೇಶ್ ಇದ್ದ ಎಂಬ ಮಾಹಿತಿ ಇದೆ. ಹೋಟೆಲ್ ನಲ್ಲಿ ಲೋಕೇಶ್ ಇದ್ದ ಬಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಕೂಡ ನೋಡಿದ್ದರಂತೆ. ಬಸ್ ಪಾಸ್ ಆದ ಕೆಲವೇ ನಿಮಿಷಗಳಲ್ಲಿ ಗುಡ್ಡ ಕುಸಿತವಾಗಿದೆ ಎಂದು ತಿಳಿಸಿದ್ದಾರೆ.
ಗೋವಾದಲ್ಲಿ ಬೋಟ್ ರಿಪೇರಿ ಮಾಡುತ್ತಿದ್ದ ಲೋಕೇಶ್, ಜ್ವರದ ಕಾರಣಕ್ಕೆ ರಜೆ ಮೇಲೆ ಊರಿಗೆ ಬಂದಿದ್ದನಂತೆ. ಗುಡ್ಡ ಕುಸಿತದ ದಿನ ಶೃಂಗೇರಿಗೆ ಹೋಗಿ ಬರುವುದಾಗಿ ಹೇಳಿ ಹೊರಟಿದ್ದ. ಐದು ದಿನಗಳಿಂದ ಶೃಂಗೇರಿಗೂ ಹೋಗಿಲ್ಲ, ಅತ್ತ ಕೆಲಸಕ್ಕೆ ಗೋವಾಗೂ ಹೋಗಿಲ್ಲ. ಹೀಗಾಗಿ ಗುಡ್ಡ ಕುಸಿತದಲ್ಲಿ ಲೋಕೇಶ್ ಕಣ್ಮರೆಯಾಗಿದ್ದು, ಕುಟುಂಬದ ಆತಂಕ ಹೆಚ್ಚಿಸಿದೆ.
ಈ ಮಧ್ಯೆ ಜುಲೈ 20ರಂದು ಅಂಕೋಲಾ ಬಳಿಯ ಇಬ್ಬರು ಮಕ್ಕಳು ತಮ್ಮ ತಂದೆ ಜಗನ್ನಾಥ್ ಅವರನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಗುಡ್ಡ ಕುಸಿತವಾದ ಸ್ಥಳದಲ್ಲಿದ್ದ ಹೋಟೆಲ್ ನಲ್ಲಿ ಜಗನ್ನಾಥ್ ಕೆಲಸ ಮಾಡುತ್ತಿದ್ದರು. ಗುಡ್ಡ ಕುಸಿತದಲ್ಲಿ ಹೋಟೆಲ್ ನಾಮಾವಶೆಷವಾಗಿದ್ದು, ಅಂದಿನಿಂದ ತಂದೆ ಮನೆಗೂ ಬಂದಿಲ್ಲ ಎಂದು ಮಕ್ಕಳು ಕಣ್ಣೀರಿಟ್ಟಿದ್ದಾರೆ. ಶಿರೂರು ಬಳಿ ಗುಡ್ಡ ಕುಸಿತ ದುರಂತದಲ್ಲಿ ನಿಜಕ್ಕೂ ಕಣ್ಮರೆಯಾದವರೆಷ್ಟು? ಸಾವನ್ನಪ್ಪಿದವರೆಷ್ಟು ಎಂಬುದೇ ಲೆಕ್ಕಕ್ಕೆ ಸಿಗುತ್ತಿಲ್ಲ. ಆದರೆ ದಿನದಿಂದ ದಿನಕ್ಕೆ ನಾಪತ್ತೆಯಾದವರ ಸಂಖ್ಯೆ ಮಾತ್ರ ಹೆಚ್ಚುತ್ತಿದೆ.