ಕಾರವಾರ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದ ಮೃತದೇಹಗಳಿಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಮತ್ತೆ ಶೋಧ ಕಾರ್ಯಾಚರಣೆಗೆ ಮುಂದಾಗಿದೆ.
ಭಾರಿ ಮಳೆಯಿಂದಾಗಿ ಜುಲೈನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿತ್ತು. ಘಟನೆಯಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 8 ಜನರ ಮೃತದೇಹ ಪತ್ತೆಯಾಗಿತ್ತು. ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೇಕೊಳ್ಳದ ಲೋಕೇಶ್ ಮೃತದೇಹಗಳು ಪತ್ತೆಯಾಗಿಲ್ಲ. ಹಲವು ಬಾರಿ ಶೋಧ ಕಾರ್ಯಾಚರಣೆ ನಡೆಸಿದ್ದರೂ ಮಳೆ ಹಾಗೂ ಗಂಗಾವಳಿ ನದಿಯಲ್ಲಿ ನೀರಿನ ಅಬ್ಬರದಿಂದಾಗಿ ಪ್ರಯತ್ನ ವಿಫಲವಾಗಿತ್ತು.
ಇದೀಗ ಮತ್ತೆ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಗೋವಾದ ಅಭಿಷೇನಿಯ ಓಷನ್ ಸರ್ವಿಸಸ್ ಕಂಪನಿಗೆ 90 ಲಕ್ಷ ರೂಪಾಯಿ ಟೆಂಡರ್ ನೀಡಿ ಕಾರವಾರಕ್ಕೆ ಡ್ರಜ್ಜಿಗ್ ಬೋಟ್ ತರಿಸಲಾಗಿದ್ದು, ನಾಳೆಯಿಂದ ಕಾರ್ಯಾಚರಣೆ ಆರಂಭವಾಗಲಿದೆ.