ಅಂಕೋಲಾ: ಶಿರೂರು ಗುಡ್ಡ ಕುಸಿತ ಘಟನಾ ಸ್ಥಳಕ್ಕೆ ಮಿಲಿಟರಿ ಪಡೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಸಂಭವಿಸಿತ್ತು. ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ವಾಹನಗಳು ಹಾಗೂ ಜನರ ಸಂಖ್ಯೆ ಎಷ್ಟೆಂಬ ಬಗ್ಗೆ ಈವರೆಗೂ ನಿಖರ ಮಾಹಿತಿ ಸಿಗುತ್ತಿಲ್ಲ. ದಿನದಿಂದ ದಿನಕ್ಕೆ ಘಟನೆಯಲ್ಲಿ ನಾಪತ್ತೆಯಾದವರ ಸಂಖ್ಯೆ ಮಾತ್ರ ಏರುತ್ತಿದೆ.
ಗುಡ್ಡ ಕುಸಿತ ದುರಂತದಲ್ಲಿ ಈವರೆಗೆ 7 ಜನರ ಮೃತದೇಹಗಳು ಪತ್ತೆಯಾಗಿವೆ. ಹೆದ್ದಾರಿಯಲ್ಲಿ ಬಿದ್ದಿರುವ ಒಂದು ಭಾಗದ ಮಣ್ಣು ಮಾತ್ರ ತೆರವುಗೊಳಿಸಲಾಗಿದ್ದು, ಇನ್ನೊಂದು ಭಾಗದ ಮಣ್ಣು ತೆರವಿಗೆ ಭಾರಿ ಮಳೆ ಅಡ್ಡಿಯಾಗುತ್ತಿರುವ ಹಿನ್ನಲೆಯಲ್ಲಿ ವಿಳಂಬವಾಗುತ್ತಿದೆ. ಕಳೆದ 6 ದಿನಗಳಿಂದ ಮಣ್ಣು ತೆರವು ನಿರಂತರವಾಗಿ ನಡೆಯುತ್ತಿದ್ದರೂ ಸಂಪೂರ್ಣ ಮಣ್ಣು ತೆರವು ಸಾಧ್ಯವಾಗಿಲ್ಲ. ಈ ನಡುವೆ ಲಾರಿಯೊಂದು ಮಣ್ಣಿನಡಿ ಸಿಲುಕಿಕೊಂಡಿದೆ ಎಂದು ಲಾರಿ ಮಾಲೀಕರು ದೂರು ನೀಡಿದ್ದಾರೆ. ಎರಡು ಕುಟುಂಬಗಳು ತಮ್ಮ ತಂದೆ ಹಾಗೂ ಮಗ ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ದೂರು ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇಂದು ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ ಪಡೆ ಆಗಮಿಸಿದೆ. ಬೆಳಗಾವಿಯಿಂದ ಮಿಲಿಟರಿ ಪಡೆ ಆಗಮಿಸಿದ್ದು, ಮಣ್ಣಿನಡಿ ಸಿಲುಕಿಕೊಂಡಿರುವವರ ರಕ್ಷಣಾಕಾರ್ಯಾಚರಣೆ ನಡೆಸಲಾಗುತ್ತಿದೆ.